Monday, May 31, 2010

Vishnu Sahasranamam 16 to 17

ಕ್ಷೇತ್ರಜ್ಞೋಕ್ಷರ->ಕ್ಷೇತ್ರಜ್ಞ+ಅಕ್ಷರ ಎರಡು ನಾಮ
16)ಕ್ಷೇತ್ರಜ್ಞ ಅಂದರೆ
ಕ್ಷೇತ್ರವನ್ನು ತಿಳಿದವನು. ಕ್ಷೇತ್ರ ಅಂದರೆ ನಾವು ವಾಸ ಮಾಡುವ ನೆಲೆ . ನಾವು ವಾಸ ಮಾಡುವುದು ಈ ಬ್ರಹ್ಮಾಂಡದಲ್ಲಿ(ಚತುರ್ಮುಖನ ಕ್ಷೇತ್ರ) ಮತ್ತು ಜೀವದ ನೆಲೆ ಶರೀರ (ನಮ್ಮ ಕ್ಷೇತ್ರ).
ಕ್ಷೇತ್ರಜ್ಞ ಅಂದರೆ ,ಈ ಬ್ರಹ್ಮಾಂಡವನ್ನು ಮತ್ತು ಈ ಶರೀರವನ್ನು ,ಈ ಪ್ರಪಂಚದ ರಹಸ್ಯವನ್ನು ಸಂಪೂರ್ಣ ತಿಳಿದವನು.
17)ಅಕ್ಷರ
ಅಕ್ಷರ ಅಂದರೆ ನಾಶವಿಲ್ಲದ್ದು ಲಿಪಿ ಅಕ್ಷರ ಅಲ್ಲ.
ಲಿಪಿ ಕೇವಲ ಅಕ್ಷರದ ಪ್ರತೀಕ. ಲಿಪಿ ನಾಶವಾಗಬಹುದು ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ ಈ ಆಕಾಶದಲ್ಲಿ ಧ್ವನಿಮುದ್ರಿತ ಆಗಿ ಶಾಶ್ವತವಾಗಿ ಇರುತ್ತದೆ.
೧. ಅಕ್ಷರ ಅಂದರೆ ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದು ಅಕ್ಷರ (Omnipresence)೨>ಕ್ಷರ ಅಂದರೆ ನಾಶ, ಅ+ಕ್ಷರ =>ನಾಶವಿಲ್ಲದ್ದು
೩. ಕ್ಷರಣ ಅಂದರೆ => ಸುರಿಸುವವನು. ಅಕ್ಷರ ಅಂದರೆ ಯುಗ ಯುಗಾಂತರದಲ್ಲಿ ನಮ್ಮ ಮೇಲೆ ಕರುಣೆಯ ಮಳೆ ಸುರಿಸುವವನು.
೪. ಅಕ್ಷ ಅಂದರೆ ಇಂದ್ರಿಯ,ರ =>ರಮಣ ಅಂದರೆ ರಮಿಸುವವನು. ಅಕ್ಷ+ರ =>ಅಕ್ಷರ ಅಂದರೆ ಆನಂದಮಯನಾಗಿ ಇಂದ್ರಿಯದಲ್ಲಿ ನೆಲೆಸಿರುವವನು
೫. ಅಕ್ಷರ ಅಂದರೆ ಅ ನಿಂದ ಕ್ಷ ವರೆಗೆ ಇರುವ ಎಲ್ಲಾ ವರ್ಣಗಳಿಂದ ಉತ್ಪನ್ನವಾಗುವ ಅನಂತಾನಂತ ಶಬ್ದಗಳಲ್ಲಿ ರಮಿಸುವವನು.
೬. ಅ => ಅಲ್ಲ/ಇಲ್ಲ -ಭಗವಂತ ಅಲ್ಲ , ಭಗವಂತ ಇಲ್ಲ !!! ಅಂದರೆ ಭಗವಂತ ನಮಗೆ ಕಾಣುವ ಯಾವುದೇ ವಸ್ತು ಅಲ್ಲ ಅವನಲ್ಲಿ ದೋಷವಿಲ್ಲ.

Sunday, May 30, 2010

Vishnu Sahasranama 8 to 15

ಭೂತಾತ್ಮಾ ಭೂತಭಾವನಃ

ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ

ಅವ್ಯಯಃ ಪುರುಷಃ ಸಾಕ್ಷೀ

8)ಭೂತಾತ್ಮಾ

ಪಂಚಭೂತಗಳಲ್ಲಿ ವ್ಯಾಪಿಸಿದವ, ಬ್ರಹ್ಮಾಂಡದಲ್ಲಿ ವ್ಯಾಪಿಸಿದವ, ಪಿಂಡಾ0ಡದಲ್ಲಿ ತುಂಬಿರುವವ,ಎಲ್ಲಾ ಜೀವದಲ್ಲಿ ಅಂತರ್ಯಾಮಿ ಆಗಿ ತುಂಬಿರುವವ.ಭೂತಿಯನ್ನು( ಉನ್ನತಿ) ಹೊಂದಿದ ಜೀವಿಗಳಿಗೆ ಮುಕ್ತಿಯನ್ನು ಕರುಣಿಸುವವ ಭೂತಾತ್ಮಾ.

9)ಭೂತಭಾವನಃ

ಸೃಷ್ಟಿ-ಸ್ಥಿತಿ-ಸoಹಾರಗಳಿಗೆ ಕಾರಣವಾದವ ,ಜೀವಿಗಳಿಗೆ ಸುಖ-ದುಃಖ ಕೊಡುವವ ಭೂತಭಾವನಃ.

10)ಪೂತಾತ್ಮಾ 11)ಪರಮಾತ್ಮಾ

ಆತ್ಮ- ಅಂದರೆ ->ದೇಹ ? ಅಲ್ಲ !!! ಭಾವನೆಗಳ ಗೂಡಾದ ಮನಸ್ಸು? ಅಲ್ಲ !! ಏಕೆಂದರೆ ಮನಸ್ಸಿನಿಂದ ಯೋಚಿಸುವುದರಿಂದ ಮನಸ್ಸನ್ನು ನಿಯಂತ್ರಿಸುವವ ಯಾರು ? ಅದೇ ಜೀವ -ಆತ್ಮ. ಆದರೆ ಈ ಜೀವವನ್ನು ನಿಯಂತ್ರಿಸುವ ಶಕ್ತಿ ಯಾರು ? ಆತನೇ -ಪರಮಾತ್ಮ (ಎಲ್ಲಾ ಆತ್ಮಗಳಿಗೂ ಪರಮವಾದ ಆತ್ಮ)

12)ಮುಕ್ತಾನಾಂ ಪರಮಾ ಗತಿಃ

ಚತುರ್ಮುಖನ ಆಯಸ್ಸು ನೂರು ಕಲ್ಪ.ಒಂದು ಕಲ್ಪ (काल्प/kālpa)ಅಂದರೆ 31 ಸಾವಿರದ 104 ಸಾವಿರ ಕೊಟಿ ವರ್ಷ .ಮಾನವನ ಸಾಧನೆ ಒಂದು ಕಲ್ಪ. ಮುಕ್ತಿ ಸ್ಥಿತಿಯಲ್ಲಿ ಮಾನವನ ಜೊತೆಗೆ ಚತುರ್ಮುಖ ಬ್ರಹ್ಮರು (ಮುಕ್ತಿಯಲ್ಲಿರುವ ಚತುರ್ಮುಖರು) ಮಾರ್ಗದರ್ಶಕನಾಗಿ ಇರುತ್ತಾರೆ.ಮುಕ್ತಾನಾಂ ಪರಮಾ ಗತಿಃ ಅಂದರೆ :ಮುಕ್ತಿ ಪಡೆದವರಿಗೆ ಮುಕ್ತಿಯಲ್ಲೂ ಚತುರ್ಮುಖ ಬ್ರಹ್ಮರೊಂದಿಗೆ -ಶ್ರೇಷ್ಠ ಮಾರ್ಗದರ್ಶನ ಮಾಡುವವನು, ಹಾಗು ಚತುರ್ಮುಖ ಬ್ರಹ್ಮರಿಗೂ -ಶ್ರೇಷ್ಠ ಮಾರ್ಗದರ್ಶನ ಮಾಡುವವನು, ಮತ್ತು ಮುಕ್ತಿ ಪಡೆದ ಎಲ್ಲಾ ಆತ್ಮರಿಗೆ ತಾಯಿಯಾಗಿರುವ ಸ್ತ್ರೀ ತತ್ವ ಚೇತನ-ಲಕ್ಷ್ಮಿಗೂ ಆಶ್ರಯದಾತನಾಗಿರುವವನು.

13)ಅವ್ಯಯಃ(ಆಯ-ವ್ಯಯ)

ಎಲ್ಲಾ ವಸ್ತುವಿನ ಒಳಗಿದ್ದೂ(ಆಯ) ಏಕರೂಪನಾಗಿ ಇರುವವನು (ಆನೆ ಮತ್ತು ಇರುವೆ ಒಳಗೆ ಇರುವ ಭಗವಂತ ಒಬ್ಬನೇ ಬೇರೆ ಬೇರೆ ಅಲ್ಲ )

ವ್ಯಯ ಅಂದರೆ ಕಮ್ಮಿ ಆಗುವುದು ,ಖರ್ಚು ,ನಾಶ ಇತ್ಯಾದಿ...... ಯಾವುದು, ಯಾವ ಕಾಲದಲ್ಲೂ ಕಡಿಮೆ ಆಗದೆ, ನಾಶವಾಗದೆ, ಅನಾದಿ-ಅನಂತ ಕಾಲದಲ್ಲಿ, ಏಕರೂಪನಾಗಿ ಇರುವ ಶಾಶ್ವತ ತತ್ವ .

14)ಪುರುಷಃ ಪುರು+ಷಃ ಇದು ತುಂಬಾ ಪ್ರಮುಖವಾದ ನಾಮ. ವೇದದ ಸಾರಭೂತವಾದ ಪುರುಷ-ಸೂಕ್ತದಲ್ಲಿ ಬರುವಂತಹ ಸೂಕ್ತಗಳ ಪ್ರತಿಫಲದ ರೂಪವೇ ಭಗವಂತನ ಪುರುಷ ನಾಮಕವಾದ ರೂಪ. ಪುರು ಅಂದರೆ ಎಲ್ಲಕ್ಕಿಂತ ದೊಡ್ಡದು ಅನಂತ.

-ಬ್ರಹ್ಮಾಂಡ ರಚನೆ ಆಗುವ ಮುಂಚೆ ಬ್ರಹ್ಮಾಂಡ ಸೃಷ್ಟಿ ಆದ ಮೇಲೂ ಅನಂತವಾಗಿ ತುಂಬಿರುವವ.

-ಪಿಂಡಾ0ಡದಲ್ಲಿ ತುಂಬಿರುವವನು

-ಪುರು+ಷಃ-> ಪುರ ಅಂದರೆ ಪೂರ್ಣತೆ ಹೊಂದಿದ ದೇಹ(perfect body ) ,

ಷಃ ಅಂದರೆ ನೆಲೆಸಿರುವವನು

Note: ಇಲ್ಲಿ ಪುರುಷಃ ಅಂದರೆ ಗಂಡಸು ಅನ್ನುವ ಅರ್ಥ ಕೊಡುವುದಿಲ್ಲ -ಮನುಷ್ಯ ಶರೀರ ಅನ್ನುವ ಅರ್ಥ ಕೊಡುತ್ತದೆ

-ಪುರದಲ್ಲಿ ಇದ್ದು ಅದರ ಒಡೆತನವನ್ನು ಹೊಂದಿರುವ ಹಾಗೂ ಎಲ್ಲಾ ಪುರದ ಒಡೆಯ -ಎಲ್ಲಾ ಪುರದಲ್ಲಿ, ಪುರದ ಹೊರಗೆ ತುಂಬಿ ಅನಂತವಾಗಿರುವ ಪರಮ ಪುರುಷ .

-ಜ್ಞಾನ,ಶಕ್ತಿ,ಭಲ,ಐಶ್ವರ್ಯ,ವೀರ್ಯ,ತೇಜಸ್ಸು ಈ -ಷಟ್ಗುಣಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ.

ಪು- ಎಲ್ಲವನ್ನು ಪಾವನ ಗೊಳಿಸುವವನು.

ರು- ತಾನು ಒಳಗಿದ್ದು- ಶತ್ತ್ರು , ಅಜ್ಞಾನ, ದುಃಖ ತಡೆದು, ಜೀವವನ್ನು ಉದ್ದಾರ ಮಾಡುವವನು.

ಷಃ- ಎಲ್ಲೆಡೆ ಮಲಗಿದವ (ಮಲಗಿದವ ಅಂದರೆ ಅನಾಯಾಸವಾಗಿ ಎಲ್ಲಾ ಕಾರ್ಯ ಮಾಡುವವ)

15)ಸಾಕ್ಷೀ

-ಎಲ್ಲವನ್ನು ಕಣ್ಣಾರೆ ಕಾಣಬಲ್ಲವ. ಭಗವಂತನ ಮುಂದೆ ನಾವು ಮುಚ್ಚಿಕೊಳ್ಳುವುದು ಏನೂ ಇಲ್ಲ .ಭಗವಂತನ ಮುಂದೆ ನಾವೆಲ್ಲರೂ ಬತ್ತಲು, ಆತನ ಮುಂದೆ ಮುಚ್ಚಿಟ್ಟುಕೊಂಡು ಮಾಡುವ ಯಾವ ಕೆಲಸವೂ ಇಲ್ಲ. ಭಗವಂತನ ಮುಂದೆ ನಾವು ಬತ್ತಲಾಗದೆ ಭಗವಂತ ನಮಗೆ ಎಂದೂ ಬಿಚ್ಚಿಕೊಳ್ಳುವೂದಿಲ್ಲ 

-ಆದುದರಿಂದ ಭಗವಂತ ಎಲ್ಲವನ್ನು ಕಾಣಬಲ್ಲ ಸಾಕ್ಷಿ.

ಅಕ್ಷಿಗಳು ಅಂದರೆ ಇಂದ್ರಿಯ ಉಳ್ಳವರು, ಅಂದರೆ ನಾವು-ನೀವು ; -ಅಕ್ಷಿಗಳ ಸಖನಾಗಿ ನಮ್ಮನ್ನು ಉದ್ದಾರ ಮಾಡುವವನು ಸಾಕ್ಷಿ

Saturday, May 29, 2010

Vishnu Sahasranama 5-7

ಭೂತಕೃದ್ಭೂತಭೃದ್ಭಾವೋ

5) ಭೂತಕೃತ್
ಸಂಸ್ಕೃತದಲ್ಲಿ ಕೃತ್ ಅನ್ನುವ ಪದಕ್ಕೆ ಎರಡು ಅರ್ಥವಿದೆ.
೧. ಸೃಷ್ಟಿ
೨. ಸoಹಾರ
ಅದೇ ರೀತಿ ಭೂತಗಳಲ್ಲಿ ಎರಡು ವಿಧ
೧. ಅಚೇತನ ಭೂತ ಅಂದರೆ ಪಂಚಭೂತಗಳು (ಮಣ್ಣು ,ಬೆಂಕಿ, ನೀರು, ಗಾಳಿ ಮತ್ತು ಆಕಾಶ)
೨. ಚೇತನ ಭೂತ ಅಂದರೆ ಪಂಚಭೂತಗಳಿಂದ ಆದ ಜೀವಗಳು.
ಭೂತಕೃತ್ (ಸೃಷ್ಟಿ) ಅಂದರೆ ಪಂಚಭೂತಗಳ ಸೃಷ್ಟಿಕರ್ತ,ಪಂಚಭೂತಾತ್ಮಕವಾದ ಬ್ರಹ್ಮಾಂಡ ಸೃಷ್ಟಿಕರ್ತ.
ಬ್ರಹ್ಮಾಂಡದಲ್ಲಿ ಪಂಚಭೂತಗಳಿಂದಾದ ಪಿಂಡಾoಡ ಸೃಷ್ಟಿ ಮಾಡಿದವ , ಪಿಂಡಾ0ಡದಲ್ಲಿ ಜೀವವನ್ನು ಇರಿಸಿ ದೇಹ ಸೃಷ್ಟಿ ಮಾಡಿದವ, ಮತ್ತು ಸಾಧನೆ ಮೂಲಕ ಜೀವರಿಗೆ ಮುಕ್ತಿಯನ್ನು ಕರುಣಿಸುವವ.
ಭೂತಕೃತ್ (ಸಂಹಾರ) ಅಂದರೆ ದೇಹ ನಾಶದ ಮೂಲಕ ಜೀವರನ್ನು ನಾಶ ಮಾಡಿದವ, ಅಭಿವೃದ್ದಿ ಹೊಂದದ ತಾಮಸ ಜೀವರನ್ನು ನಾಶ ಮಾಡಿದವ, ಪಂಚಭೂತಾತ್ಮಕವಾದ ಶರೀರ ನಾಶ ಮಾಡಿದವ, ಪಂಚಭೂತಾತ್ಮಕವಾದ ಬ್ರಹ್ಮಾಂಡ ನಾಶ ಮಾಡಿದವ , ಪ್ರಳಯ ಕಾಲದಲ್ಲಿ ಪಂಚಭೂತಗಳನ್ನೂ ನಾಶ ಮಾಡುವವ.
6)ಭೂತಭೃತ್

ಸೃಷ್ಟಿ-ಸ್ಥಿತಿ-ಲಯದಲ್ಲಿ ಪಂಚಭೂತಗಳ ಧಾರಣೆ ಮಾಡಿದವ,ಪಂಚಭೂತಾತ್ಮಕವಾದ ಬ್ರಹ್ಮಾಂಡ ಧಾರಣೆ ಮಾಡಿದವ, ಪಂಚಭೂತಗಳಿಂದಾದ ಪಿಂಡಾ0ಡ ಧಾರಣೆ ಮಾಡಿದವ, ಪಿಂಡಾ0ಡದಲ್ಲಿರುವ ಜೀವವನ್ನು ಧಾರಣೆ ಮಾಡಿದವ ಮತ್ತು ಮುಕ್ತಿಯನ್ನು ಪಡೆದ ಜೀವವನ್ನು ಧಾರಣೆ ಮಾಡಿದವ.
7)ಭಾವಾಯ

ಸೃಷ್ಟಿ-ಸ್ಥಿತಿ-ಲಯ ಇದು ಭಗವಂತನ ಗುಣ. ಆತ ಸಚ್ಚಿದಾನ೦ದ. ಹುಟ್ಟು-ಸಾವು ನೈಸರ್ಗಿಕ ಕ್ರಿಯೆ.
ಸಾವು ಹುಟ್ಟಿನ ಮೂಲ, ಹುಟ್ಟು ಸಾವಿನ ಮೂಲ. ಭಗವಂತ ಎಂದೆಂದಿಗೂ ಶಾಶ್ವತವಾಗಿ ಇರುವವನು.
ಭಾವ ಅಂದರೆ ಸಚ್ಚಿದಾನ೦ದ ಸ್ವರೂಪ.

Friday, May 28, 2010

Vishnu Sahasranama 2-4

ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ

2)ವಿಷ್ಣು
ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂದಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕ್ರತ ಪದ ವಿಷ್ಣು !! ವಿಷ್ಣು ಅಂದರೆ ಸರ್ವಶಬ್ದ ವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತ ಅರ್ಥ. ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ(ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಹಾಗೂ ಎಲ್ಲರನ್ನು ರಕ್ಷಿಸುವ ಬಲ ಇರುವ (ಣ) ಸರ್ವ ಶಕ್ತ ಭಗವಂತ ವಿಷ್ಣು.
3) ವಷಟ್ಕಾರ
ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು ಮಂತ್ರಗಳಿಂದ (ಯಜ್ಞ ನಾಮಕ , ಯಜ್ಞ ಪುರುಷ , ಯಜ್ಞೇಶ್ವರ , ಯಜ್ಞ ಭಾವನ , ಯಜ್ಞ ಭೋಕ್ತ ) ಆಹುತಿಯನ್ನು ಕೊಡುತ್ತಿದ್ದರು. ಈ ಮಂತ್ರದಲ್ಲಿ ಬರುವ ಐದನೇ ಹೆಸರು ಭಗವಂತನ ವಷಟ್ಕಾರ ಅನ್ನುವ ಹೆಸರು.
ಏಕೆ ಅವನು ವಷಟ್ಕಾರ ? ಏಕೆಂದರೆ ತಾನು ಇಚ್ಚಿಸಿದಂತೆ ಜಗತ್ತನ್ನು ಸೃಷ್ಟಿ ಮಾಡಿ ಈ ಕೆಳಗಿನ ಆರು ಮುಖದಲ್ಲಿ ಜಗತ್ತಿನಾದ್ಯಂತ ತುಂಬಿರುವವನು ವಷಟ್ಕಾರ.
೧. ಜ್ಞಾನ- ಒಂದು ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ ಜ್ಞಾನ ಶಕ್ತಿ ಇರುವವನು.
೨. ಶಕ್ತಿ-ಕರ್ತೃತ್ವ ಶಕ್ತಿ ಉಳ್ಳವನು.
೩. ಬಲ-ರಕ್ಷಣೆ ಮಾಡುವ ತಾಕತ್ತು ( ಧಾರಣ ಶಕ್ತಿ ) ಇರುವವನು
೪. ಐಶ್ವರ್ಯ- ಒಡೆತನ
೫. ವೀರ್ಯ- ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು
೬. ತೇಜಸ್ಸು - ಜಗತ್ತನ್ನು ಬೆಳಗಿಸುವ ಬೆಳಕು.
ಈ ಮೇಲಿನ ಆರು ಗುಣಗಳಿಂದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾದ ಪರಬ್ರಹ್ಮ -ವಷಟ್ಕಾರ.
4)ಭೂತಭವ್ಯಭವತ್ಪ್ರಭುಃ

ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ. ಹಿಂದೆ ಅನಂತವಾಗಿ ಇದ್ದದ್ದು (ಭೂತಕಾಲದಲ್ಲಿ) ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗು ವರ್ತಮಾನ ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು. ಈ ನಾಮವನ್ನು ನಾವು ಒಡೆದು ನೋಡಿದಾಗ ಭೂತ+ಭವಿ+ಭವಂತಿ+ಪ್ರಭು ಎನ್ನುವ ನಾಲ್ಕು ಪದಗಳನ್ನು ನೋಡಬಹುದು. ಭೂತಿಯನ್ನು ಪಡೆದವರು ಭೂತಗಳು ಅಂದರೆ ಮುಕ್ತಿಗೆ ಯೋಗ್ಯರಾದ ಸಾತ್ವಿಕರು , ಭವಿಗಳು ಎಂದರೆ ಸಂಸಾರಿಗಳು ಅಥವಾ ರಾಜಸರು , ಭವಂತಿ ಎಂದರೆ ಜೀವನದಲ್ಲಿ ಎತ್ತರಕ್ಕೆ ಏರದ ತಾಮಸರು. ಆದ್ದರಿಂದ ಭೂತಭವ್ಯಭವತ್ಪ್ರಭುಃ ಎಂದರೆ ಸಾತ್ವಿಕರಿಗೂ , ರಾಜಸರಿಗೂ ಹಾಗು ತಾಮಸರಿಗೂ ಪ್ರಭು ಎಂದರ್ಥ.
ಈ ರೀತಿ ಹಿಂದೆ ಇದ್ದವನು, ಈಗಲೂ ಇರುವವನು, ಮುಂದೆ ಎಂದೆಂದೂ ಎಲ್ಲರ ಪ್ರಭುವಾಗಿ ಸರ್ವ ಜೀವ ರಕ್ಷಕನಾಗಿರುವ ಭಗವಂತ ಭೂತಭವ್ಯಭವತ್ಪ್ರಭುಃ

Thursday, May 27, 2010

Vishnu Sahasranama 1

ವಿಷ್ಣು ಸಹಸ್ರನಾಮ: ವಿಶ್ವಮ್
1) ವಿಶ್ವಮ್
ವಿಷ್ಣು ಸಹಸ್ರನಾಮದ ಮೊದಲ ನಾಮ ವಿಶ್ವಂ. ಈ ಹಿಂದೆ ಹೇಳಿದಂತೆ ವಿಷ್ಣು ಸಹಸ್ರನಾಮ ಸರ್ವ ವೇದಗಳ ಸಾರ. ಇಲ್ಲಿ 'ವಿ ' ಎಂದರೆ ಪಕ್ಷಿ ಅನ್ನುವ ಅರ್ಥವನ್ನೂ, ಶ್ವ ಎಂದರೆ ಚಲಿಸುವವನು ಎನ್ನುವ ಅರ್ಥವನ್ನು ಕೊಡುತ್ತದೆ . ಆದ್ದರಿಂದ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು ತನ್ನ ವಾಹನವಾಗಿರಿಸಿಕೊಂಡಿರುವ ಭಗವಂತ ವಿಶ್ವ .
ಮೇಲೆ ಹೇಳಿದ ಅರ್ಥವಲ್ಲದೆ ಇನ್ನೂ ಹತ್ತು ಹಲವು ಅರ್ಥಗಳನ್ನು ವಿಶ್ವ ಅನ್ನುವ ನಾಮದಲ್ಲಿ ನಾವು ನೋಡಬಹುದು.
ಚತುರ್ಮುಖ ಬ್ರಹ್ಮನನ್ನು ವಿಶ್ವ ಎಂದು ಕರೆಯುತ್ತಾರೆ. ಸೃಷ್ಟಿಕರ್ತನಾದ ಬ್ರಹ್ಮನನ್ನು ತನ್ನ ನಾಭಿಯಲ್ಲಿ ಧರಿಸಿರುವ ಭಗವಂತ, ಆತನ ಮೂಲಕ ಈ ಸೃಷ್ಟಿಗೆ ಕಾರಣಕರ್ತನಾಗಿದ್ದಾನೆ . ಆದ್ದರಿಂದ ಆತ ವಿಶ್ವಂ. ಆಂಜನೇಯ ರೂಪಿ ಮುಖ್ಯಪ್ರಾಣನನ್ನು ಕೂಡ ವಿಶ್ವ ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ ಚಲನೆಯನ್ನು ಕೊಡುವಂತಹ, ಪ್ರಾಣಶಕ್ತಿಯಾದ ಮುಖ್ಯಪ್ರಾಣನಲ್ಲಿ ತುಂಬಿದ್ದು, ನಮ್ಮ ದೇಹದಲ್ಲಿ ಬಿಂಬರೂಪದಲ್ಲಿ ಪ್ರವೇಶಿಸಿ (ವಿಶತಿ), ಅಂತರ್ಯಾಮಿಯಾಗಿ ದೇಹದ ಒಳಗೂ ಹೊರಗೂ ತುಂಬಿರುವ ಪರಿಪೂರ್ಣ ಜ್ಞಾನಾನಂದಮಯನಾದ ಭಗವಂತ ವಿಶ್ವಂ.

Wednesday, May 26, 2010

Vishnu sahasranama-Peetike

ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭ್ಯಾಷತ || 1 ||
ವೈಶಂಪಾಯನು ನುಡಿದನು:
ಪಾಪಗಳನ್ನು ಕಳೆದು ಪರಿಶುದ್ಧವಾಗುವ ಎಲ್ಲಾ ಧರ್ಮಗಳ ಬಗ್ಗೆ  ಸಮಗ್ರವಾಗಿ ಭೀಷ್ಮಾಚಾರ್ಯರಿಂದ ಕೇಳಿ ತಿಳಿದ ನಂತರ, ಯುಧಿಷ್ಠಿರ ಭೀಷ್ಮಾಚಾರ್ಯರಲ್ಲಿ ಈ ರೀತಿ ಪ್ರಶ್ನೆ ಹಾಕುತ್ತಾನೆ.  
ಯುಧಿಷ್ಠಿರ:
ಕಿಮೇಕಂ ದೈವತಂ ಲೋಕೇ ಕಿಂ ವಾಪ್ಯೇಕಂ ಪರಾಯಣಂ |
ಸ್ತುವಂತಃ ಕಂ ಕಮರ್ಚಂತಃ ಪ್ರಾಪ್ನುಯುರ್ಮಾನವಾಃ ಶುಭಮ್ || 2 ||
ಕೋ ಧರ್ಮಃ ಸರ್ವಧರ್ಮಾಣಾಂ ಭವತಃ ಪರಮೋ ಮತಃ |
ಕಿಂ ಜಪನ್ಮುಚ್ಯತೇ ಜಂತುರ್ಜನ್ಮಸಂಸಾರಬಂಧನಾತ್ || 3 ||

ಎಲ್ಲ ಶಾಸ್ತ್ರಗಳು ಸಾರುವ ಹಿರಿಯ ದೇವತೆ ಯಾರು? ಒಬ್ಬನೇ ಒಬ್ಬ ಕೊನೆಯ ಆಸರೆ ಯಾರುಯಾರನ್ನು ಹಾಡಿ ಹೊಗಳುತ್ತ, ಆರಾಧಿಸುವುದರಿಂದ  ಮಾನವನಿಗೆ ಒಳಿತು ?  
ಯಾವುದು ಎಲ್ಲ ಧರ್ಮಗಳಿಗೂ ಮಿಗಿಲಾದ ಧರ್ಮ ಎಂದು ನಿಮ್ಮ ಅಭಿಮತ ? ಯಾವುದನ್ನು ಜಪಿಸುವುದರಿಂದ  ಮಾನವ ಹುಟ್ಟಿನಿಂದ ಹಾಗು ಸಂಸಾರ ಬಂಧದಿಂದ  ಮುಕ್ತಿ ಪಡೆಯುತ್ತಾನೆ
ಭೀಷ್ಮ:
ಜಗತ್ಪ್ರಭುಂ ದೇವದೇವಮನಂತಂ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ಪುರುಷಃ ಸತತೋತ್ಥಿತಃ || 4 ||
ತಮೇವ ಚಾರ್ಚಯನ್ನಿತ್ಯಂ ಭಕ್ತ್ಯಾ ಪುರುಷಮವ್ಯಯಮ್ |
ಧ್ಯಾಯನ್ ಸ್ತುವನ್ನಮಸ್ಯಂಶ್ಚ ಯಜಮಾನಸ್ತಮೇವ ಚ || 5 ||
ಅನಾದಿ ನಿಧನಂ ವಿಷ್ಣುಂ ಸರ್ವಲೋಕಮಹೇಶ್ವರಮ್ |
ಲೋಕಾಧ್ಯಕ್ಷಂ ಸ್ತುವನ್ನಿತ್ಯಂ ಸರ್ವದುಃಖಾತಿಗೋ ಭವೇತ್ || 6 ||
ಬ್ರಹ್ಮಣ್ಯಂ ಸರ್ವಧರ್ಮಜ್ಞಂ ಲೋಕಾನಾಂ ಕೀರ್ತಿವರ್ಧನಮ್ |
ಲೋಕನಾಥಂ ಮಹದ್ಭೂತಂ ಸರ್ವಭೂತಭವೋಧ್ಭವಮ್ || 7 ||

ಎಂದೂ ಎಡವದೇ ಎಚ್ಚರದಿಂದಿರುವ ಸಾಧಕ, ಜಗದ ಒಡೆಯನನ್ನು, ದೇವತೆಗಳಿಗೂ ಹಿರಿಯನಾದ ಹಿರಿದೈವವನ್ನು, ಆತನ ಸಾವಿರನಾಮಗಳಿಂದ ಸ್ತುತಿಸುತ್ತಾ; ಅಳಿವಿರದ ಆ ಪರಮಪುರುಷನನ್ನೇ ಅನುಗಾಲ ಭಕ್ತಿಯಿಂದ ಪೂಜಿಸುತ್ತ; ಅವನನ್ನೇ ಮನದಲ್ಲಿ ನೆನೆಯುತ್ತ, ಸದಾ ಸ್ತುತಿಸುತ್ತತಲೆಬಾಗಿ ಆರಾಧಿಸುತ್ತಾ;
ತುದಿ-ಮೊದಲು ಇರದವನನ್ನು, ಎಲ್ಲೆಡೆ ತುಂಬಿರುವವನನ್ನು. ಎಲ್ಲ ಲೋಕಗಳ ಹಿರಿಯ ಒಡೆಯರಿಗೂ ಒಡೆಯನಾದವನನ್ನು, ಮೇಲೆ ನಿಂತು ಎಲ್ಲವನ್ನು ಕಾಣುತ್ತಿರುವವನನ್ನು;
ತಿಳಿದವರು ಮೆಚ್ಚುವವನನ್ನು, ಎಲ್ಲ ಧರ್ಮಗಳ ಬಲ್ಲವನನ್ನು, ಜೀವಗಳಿಗೆ ಜಸದ ಏರು ತೋರುವವನನ್ನು; ಜೀವ ಜಾತದ ಒಡೆಯನನ್ನು, ಎಲ್ಲ ಜೀವಗಳಿಗೂ  ಬಾಳನಿತ್ತವನನ್ನು, ಹಿರಿಯ ತತ್ವವಾದ ನಾರಾಯಣನನ್ನು ಆರಾಧಿಸಬೇಕು.    
 
ಏಷ ಮೇ ಸರ್ವಧರ್ಮಾಣಾಂ ಧರ್ಮೋಧಿಕತಮೋ ಮತಃ
ಯದ್ಭಕ್ತ್ಯಾ ಪುಂಡರೀಕಾಕ್ಷಂ ಸ್ತವೈರರ್ಚೇನ್ನರಃ ಸದಾ || 8 ||

ಭಗವಂತನನ್ನು ಅವನ ಗುಣದ ಅನುಸಂಧಾನದ ಮೂಲಕ ಸ್ತುತಿಸುವುದೇ ಧರ್ಮದಲ್ಲಿ ಶ್ರೇಷ್ಠವಾದ ಧರ್ಮ. ಸ್ತೋತ್ರಗಳಲ್ಲಿ  ಶ್ರೇಷ್ಠವಾದ ಸ್ತೋತ್ರ ವಿಷ್ಣು ಸಹಸ್ರನಾಮ. ಭಗವಂತನ ಸ್ತೋತ್ರವನ್ನು ಶ್ರದ್ಧೆ-ಭಕ್ತಿಯಿಂದ, ವಿಶ್ವಾಸ-ನಂಬಿಕೆಯಿಂದ ಸ್ತುತಿಸುವುದು ಎಲ್ಲಾ ಧರ್ಮಗಳಿಗಿಂತ ಮಹತ್ತಾದ ಧರ್ಮ. ನಮ್ಮ ನಂಬಿಕೆ ಎಂತದ್ದೋ, ನಮ್ಮ ವ್ಯಕ್ತಿತ್ವ ಎಂತದ್ದೋ, ನಾವು ಪಡೆಯುವ ಫಲ ಅಂತದ್ದು. ನಂಬಿಕೆಯನ್ನು ಬೆಳೆಸಿಕೊಳ್ಳದಿದ್ದರೆ ಉಪಯೋಗವಿಲ್ಲ. ತಿಳಿಯದೇ ನಂಬದೇ ಪೂಜಿಸಿ ಉಪಯೋಗವಿಲ್ಲ. ಗೌರವಪೂರ್ವಕವಾಗಿ, ನಂಬಿಕೆಯಿಂದ, ಸ್ತೋತ್ರಗಳಿಂದ ಹಾಡಿ ಕೊಂಡಾಡಿ ಪೂಜಿಸುವುದು ಶ್ರೇಷ್ಠವಾದ ಧರ್ಮ.    
ಪರಮಂ ಯೋ ಮಹತ್ತೇಜಃ ಪರಮಂ ಯೋ ಮಹತ್ತಪಃ |
ಪರಮಂ ಯೋ ಮಹದ್ಬ್ರಹ್ಮ ಪರಮಂ ಯಃ ಪರಾಯಣಮ್ || 9 ||

ಭಗವಂತ ಬೆಳಕುಗಳಿಗೆ ಬೆಳಕು ನೀಡುವ ಸ್ವರೂಪ, ಎಲ್ಲರ ಚಿಂತನೆಯ ಕೊನೆಯ ಗುರಿ, ಎಲ್ಲ ಜ್ಞಾನದ ಗಮ್ಯ ಆ ಭಗವಂತ.  ಇಲ್ಲಿ ಭಗವಂತನನ್ನು  'ಪರಮ ಮಹಾ ಬ್ರಹ್ಮ' ಎನ್ನುತ್ತಾರೆ. ಇಲ್ಲಿ ಬ್ರಹ್ಮ ಎಂದರೆ ಜೀವರು; ಪರಬ್ರಹ್ಮ ಎಂದರೆ ಮುಕ್ತರಾದ ಜೀವರು; ಪರಮಬ್ರಹ್ಮ ಎಂದರೆ ಶ್ರೀತತ್ವ, ನಿತ್ಯ ಮುಕ್ತಳಾದ ಶ್ರೀಲಕ್ಷ್ಮಿ. ಪರಮ ಮಹಾ ಬ್ರಹ್ಮ ಎಂದರೆ ನಾರಾಯಣ. ಭಗವಂತ ಪರಾಯಣರಿಗೂ ಕೂಡಾ ಪರಮ. ಇಲ್ಲಿ ಪರಾಯಣರು ಎಂದರೆ ನಮಗೆ ಆಸರೆಯಾಗಿರುವ ತತ್ವಾಭಿಮಾನಿ ದೇವತೆಗಳು.  ಭಗವಂತ ಸರ್ವ ದೇವತೆಗಳ ಒಡೆಯ.  

ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ || 10 ||

ಪವಿತ್ರ ಎಂದರೆ ಪಾವನಗೊಳಿಸುವಂತದ್ದು. ನಾವು ನಿರ್ಮಲವಾಗಬೇಕಾದರೆ, ಆ ಪರಮ ಪವಿತ್ರನಾದ ಭಗವಂತನಲ್ಲಿ ಶರಣಾಗಬೇಕು. ಆತ ಪಾವನಗಳಿಗೆ ಪಾವನನಾದವನು; ಒಳಿತುಗಳಿಗೆ ಒಳಿತಾದವನು; ದೇವತೆಗಳಿಗೂ ಹಿರಿ ದೈವಜೀವರಿಗೆ ಅಳಿವಿರದ ಅಪ್ಪ.  
ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ |
ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ || 11 ||

ಸೃಷ್ಟಿ ಕಾಲದಲ್ಲಿ ಭಗವಂತನಿಂದ ಈ ಕಾಣುವ ಸೃಷ್ಟಿ ನಿರ್ಮಾಣವಾಗುತ್ತದೆ. ಎಲ್ಲ ಜೀವಗಳು ಹುಟ್ಟಿ ಬರುತ್ತವೆ, ಪ್ರಳಯಕಾಲದಲ್ಲಿ ಕಾಣುವ ರೂಪ ಕಳೆದುಕೊಂಡು ಸೂಕ್ಷ್ಮ ರೂಪದಲ್ಲಿ ಆ ಭಗವಂತನನ್ನು ಹೋಗಿ ಸೇರುತ್ತವೆ. ಪ್ರತಿಯೊಂದು ಕ್ರಿಯೆ  ವ್ಯವಸ್ಥಿತವಾಗಿ, ಗಣಿತಬದ್ಧವಾಗಿ ನಡೆಯುತ್ತದೆ. ಇಲ್ಲಿ ಯಾವುದೂ ಆಕಸ್ಮಿಕವಲ್ಲ.  
 
ತಸ್ಯ ಲೋಕಪ್ರಧಾನಸ್ಯ ಜಗನ್ನಾಥಸ್ಯ ಭೂಪತೇ |
ವಿಷ್ಣೋರ್ನಾಮಸಹಸ್ರಂ ಮೇ ಶ್ರುಣು ಪಾಪಭಯಾಪಹಮ್ || 12 ||

ಭಗವಂತ ನಮ್ಮ ಪಾಪ ಭಯವನ್ನು ತೊಡೆದು ಹಾಕುತ್ತಾನೆ. ತಪ್ಪು ಮಾಡಿದಾಗ ತಿದ್ದಿ ಉದ್ಧಾರ ಮಾಡುತ್ತಾನೆ.  "ಓ ಭೂಪತಿ , ಎಲ್ಲ ಶಾಸ್ತ್ರಗಳ ಮುಖ್ಯ ವಾಚ್ಯನಾದ ಜಗದೊಡೆಯನಾದ ಇಂತಹ ವಿಷ್ಣುವಿನ, ಸಾವಿರ ನಾಮಗಳನ್ನು ಆಲಿಸು".    

ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ |
ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೂತಯೇ || 13 ||

"ಪ್ರಾಚೀನ ಋಷಿ-ಮುನಿಗಳು, ಮಹಾತ್ಮರು, ನಿರಂತರ ಉಪಾಸನೆ ಮಾಡಿಕೊಂಡು ಬಂದಿರುವ ಆ  ಪರಮಾತ್ಮನ ಗುಣವನ್ನು ಸಾರುವ, ಹೆಸರಾಂತ  ಸಾವಿರ ನಾಮಗಳನ್ನು ಹೇಳುತ್ತೇನೆ" ಎಂದು ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು, ಶ್ರೀಕೃಷ್ಣನ ಸಮ್ಮುಖದಲ್ಲಿ ಧರ್ಮರಾಯನಿಗೆ ಉಪದೇಶ ಮಾಡುತ್ತಾರೆ.
ಭಗವಂತನ ನಾಮವನ್ನು ಸ್ತ್ರೀ-ಪುರುಷ-ನಪುಂಸಕ ಲಿಂಗಗಳಲ್ಲಿ ಕಾಣಬಹುದು. ಸ್ತ್ರೀ-ಪುರುಷರಲ್ಲಿರುವ ಸರ್ವ ಗುಣಗಳಿಂದ ಪೂರ್ಣನಾದ ಭಗವಂತನಲ್ಲಿ ಯಾವುದೇ ರೀತಿಯ ಸ್ತ್ರೀ-ಪುರುಷ ಗುಣದೋಷಗಳಿಲ್ಲ. ಈ ರೀತಿ ಲಿಂಗ ಸಮನ್ವಯ ಭಗವಂತನಲ್ಲಿ ಮಾತ್ರ ಸಾಧ್ಯ.
ಸಾಮಾನ್ಯವಾಗಿ  ಯಾವುದೇ ಪೂಜೆ-ಕರ್ಮವನ್ನು ಮಾಡುವಾಗ ವಿಘ್ನನಿವಾರಕನಾದ ಗಣಪತಿ ಪೂಜೆ ಮಾಡುವುದು ಸಂಪ್ರದಾಯ. ಅದಕ್ಕಾಗಿ ಗಣಪತಿ ಮಂಡಲ ಬರೆದು ಪೂಜಿಸಿ ನಂತರ ಇತರ ಕರ್ಮವನ್ನು ಮಾಡುತ್ತಾರೆ.
 ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದ
ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ಹೀಗೆ ವಿಘ್ನ ನಿವಾರಕ ಗಣಪತಿ ಸ್ತುತಿ ಮೊದಲಿಗೆ. ವಿಷ್ಣು ಸಹಸ್ರನಾಮ ಭಗವಂತನ 'ವಿಶ್ವಮ್' ಎನ್ನುವ ವಿಘ್ನನಿವಾರಕ 'ವಿಶ್ವಂಭರ' ರೂಪದ ನಾಮದಿಂದ ಪ್ರಾರಂಭವಾಗುತ್ತದೆ.
ನಮ್ಮ  ಜೀವನದಲ್ಲಿರುವ ಮೂರು ಅವಸ್ಥೆಗಳಲ್ಲಿ (ಎಚ್ಚರ-ಕನಸು-ನಿದ್ದೆ), ನಮ್ಮ ಎಚ್ಚರವನ್ನು ನಿಯಂತ್ರಿಸುವ ಭಗವಂತನ ರೂಪ 'ವಿಶ್ವ' ನಾಮಕ ರೂಪ.


ಬನ್ನಿ, ವಿಘ್ನನಾಶಕ ವಿಶ್ವಂಭರನಾಗಿ, ನಮಗೆ ಎಚ್ಚರವನ್ನು ಕೊಟ್ಟು, ವಿಷ್ಣುಸಹಸ್ರನಾಮ ಚಿಂತನೆ ಮಾಡುವಂತೆ ಮಾಡು ಎಂದು ಆ ಭಗವಂತನಲ್ಲಿ ಪ್ರಾರ್ಥಿಸಿ, ಆತನ ನಾಮದಲ್ಲಿ ಅವನ ಗುಣದ ಅನುಸಂಧಾನ ಮಾಡೋಣ.   

Vishnu Sahasranama Preface

ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಪೀಠಿಕೆ

ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ. ಇತ್ತ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು  ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ  ಮನಸ್ಸಿಗೆ `ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರು, ಹಿರಿಯರು, ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ನಂತರ, ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ  ಭೀಷ್ಮಾಚಾರ್ಯರ ಬಳಿಗೆ ಕರೆತಂದು, ಆತನಿಗೆ ಧರ್ಮ ಪಾಠವನ್ನು ಬೋಧಿಸುವಂತೆ  ಕೇಳಿಕೊಳ್ಳುತ್ತಾನೆ. ಧರ್ಮದ ಪರ ಹೋರಾಡಿ ಗೆದ್ದ ಧರ್ಮರಾಯನನ್ನು ಕೊಂಡಾಡಿದ ಭೀಷ್ಮಾಚಾರ್ಯರು, "ಒಂದು ವೇಳೆ  ನೀನು  ಅನ್ಯಾಯದ  ವಿರುದ್ಧದ   ಯುದ್ಧದಲ್ಲಿ  ಹೋರಾಡದೆ ಇದ್ದಿದ್ದರೆನಿನ್ನನ್ನು ಹೇಡಿ ಎನ್ನುತ್ತಿದ್ದೆ" ಎನ್ನುತ್ತಾರೆ.  ಈ ಮಾತಿನಿಂದ  ಧರ್ಮರಾಯನಲ್ಲಿದ್ದ  ಪಾಪ ಪ್ರಜ್ಞೆ ಹೊರಟುಹೋಗಿ  , ತನಗೆ ಧರ್ಮೋಪದೇಶ  ಮಾಡಬೇಕೆಂದು  ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ. ಈ ರೀತಿ ಭೀಷ್ಮಾಚಾರ್ಯರು ಧರ್ಮರಾಯನಿಗೆ ಧರ್ಮೋಪದೇಶ ಮಾಡಿದ ಮಹಾಭಾರತದ ಅನುಶಾಸನ ಪರ್ವದ ಕೊನೆಯ ಅಪೂರ್ವ ಉಪದೇಶ ಈ ವಿಷ್ಣು  ಸಹಸ್ರನಾಮ.  ವ್ಯಾಸ ಮಹರ್ಷಿಗಳು ಈ ಸಾವಿರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ಕಾಣಿಕೆಯಾಗಿ ನೀಡಿದ್ದಾರೆ.

          ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮಗೆ ಇರುವ ಹೆಸರು ಗುಣವಾಚಕವಲ್ಲ.  ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ, ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾಗಿರುವ,  ಸುಪ್ರಸಿದ್ಧ ಸಹಸ್ರನಾಮ ವಿಷ್ಣು ಸಹಸ್ರನಾಮ. ಪದ್ಮ ಪುರಾಣದಲ್ಲಿ ಒಂದು ವಿಷ್ಣು ಸಹಸ್ರನಾಮವನ್ನು ಕಾಣುತ್ತೇವೆ. ಆದರೆ ಅದು ಅಷ್ಟೊಂದು ಪ್ರಚಲಿತದಲ್ಲಿಲ್ಲ.

ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು  ನಾಮಗಳು ಒಂದಕ್ಕಿಂತ ಹೆಚ್ಚು ಭಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ. ವಿಷ್ಣು ಸಹಸ್ರನಾಮದಲ್ಲಿ  ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾಧ್ಯ.

          ಸಹಸ್ರನಾಮದ ರಾಜ ಮಹಾಭಾರತದ ಅನುಶಾಸನ ಪರ್ವದ ವಿಷ್ಣು ಸಹಸ್ರನಾಮ. ಪ್ರಾಚೀನರು ಹೇಳುವಂತೆ, ಅಧ್ಯಾತ್ಮ ಗ್ರಂಥಗಳಲ್ಲಿ ಶ್ರೇಷ್ಠವಾದದ್ದು ವೇದವ್ಯಾಸರು ರಚಿಸಿದ "ಭಾರತ" ಏಕೆಂದರೆ ಇದು ಭಗವಂತನ ರಚನೆ.

ನಿರ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಚಕ್ಷತೇ |
   
ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ ||

ದೇವೈರ್ಬ್ರಹ್ಮಾದಿಭಿಃ ಸರ್ವೈಃ ಋಷಿಭಿಶ್ಚ ಸಮನ್ವಿತೈಃ |
ವ್ಯಾಸಸ್ಯೈವಾಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್ ||

ಅಂದರೆ ಸರ್ವ ಶಾಸ್ತ್ರಾರ್ಥಗಳಿಗು  ಮಹಾಭಾರತವೇ ನಿರ್ಣಾಯಕ. ಹಿಂದೆ ಮಹಾಭಾರತ ಮತ್ತು ಸಕಲ ವೇದಗಳು, ಶ್ರೀವೇದವ್ಯಾಸರ ಆದೇಶದಂತೆಯೇ, ಬ್ರಹ್ಮಾದಿ ದೇವತೆಗಳಿಂದಲೂ, ಸಕಲ ಋಷಿಗಳಿಂದಲೂ, ಒಂದು ತಕ್ಕಡಿಯಲ್ಲಿ ಇರಿಸಿ ತೂಗಲ್ಪಟ್ಟವು; ಆಗ ಮಹಾಭಾರತವು ವೇದಾದಿ ಇತರ ಸಕಲ ಶಾಸ್ತ್ರಗಳನ್ನು ಮೀರಿಸಿತ್ತು !! ಇಂತಹ ಮಹಾಭಾರತದ ಸಾರ- 700 ಶ್ಲೋಕಗಳನ್ನೊಳಗೊಂಡ ಭಗವದ್ಗೀತೆ ಮತ್ತು ಸಾವಿರ ನಾಮಗಳನ್ನೊಳಗೊಂಡ ವಿಷ್ಣುಸಹಸ್ರನಾಮ.

           ಮಹಾಭಾರತ ಮಹತ್ತಾದ ಅರ್ಥದ ಭಾರವಿರುವ ಗ್ರಂಥ. ಅದು ಮನೋವೈಜ್ಞಾನಿಕವಾಗಿ ನಮ್ಮ ಮನಸ್ಸಿಗೆ ತರಬೇತಿ ಕೊಡುವ ಗ್ರಂಥ. ಪ್ರತಿಯೊಬ್ಬ ಮನುಷ್ಯನ ಒಳಗೆ ನಡೆಯುವ ಜೀವನ್ಮೌಲ್ಯಗಳನ್ನು ಹೇಳುವ ಗ್ರಂಥ. ಇದು ನ್ಯಾಯ- ಅನ್ಯಾಯ, ಧರ್ಮ-ಅಧರ್ಮ, ಒಳ್ಳೆಯತನ-ಕೆಟ್ಟತನಗಳ ನಡುವೆ ನಡೆಯುವ ಹೋರಾಟವನ್ನು ತಿಳಿಸುವ ಗ್ರಂಥ. ಮಹಾಭಾರತದಲ್ಲಿ ಬರುವ ಪಾಂಡವರ  ಏಳು  ಪಾತ್ರಗಳು  ಒಬ್ಬ ಮನುಷ್ಯನಲ್ಲಿರಬೇಕಾದ ಹದಿನೆಂಟು ಗುಣಗಳನ್ನು ಪ್ರತಿನಿಧಿಸುತ್ತವೆ.

೧. ಧರ್ಮರಾಜ - ಧರ್ಮ
೨. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ.
೩. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ
೪.೫. ನಕುಲ-ಸಹದೇವ - ಶೀಲ ಮತ್ತು ವಿನಯ
೬. ದ್ರೌಪದಿ - ವೇದವಿದ್ಯೆ
೭. ಶ್ರೀಕೃಷ್ಣ ವೇದವೇದ್ಯ

ಹೀಗೆ ಮಹಾಭಾರತದ ಪ್ರತಿಯೊಂದು ಶ್ಲೋಕ, ಪ್ರತಿಯೊಂದು ಪದ, ಪ್ರತಿಯೊಂದು ಅಕ್ಷರ  ಎಲ್ಲಕ್ಕಿಂತ ಎತ್ತರದಲ್ಲಿರುವ ಹದಿನೆಂಟನೆಯವನಾದ ಭಗವಂತನನ್ನು ಹೇಳುತ್ತದೆ. ಭಾರತದಲ್ಲಿ  ಒಂದು ಲಕ್ಷ ಶ್ಲೋಕಗಳಿವೆ. ಅಂದರೆ ಒಟ್ಟಿಗೆ 32 ಲಕ್ಷ ಅಕ್ಷರಗಳಿವೆ. ಪ್ರತಿಯೊಂದು ಅಕ್ಷರ ಭಗವಂತನ ನಾಮವಾಗಿದೆ. ಈ ರೀತಿ ಭಗವಂತನ ಗುಣಗಾನ ಮಾಡುವ ಪದಪುಂಜ ಮಹಾಭಾರತ.  ಸಾಮಾನ್ಯ ಜನರಿಗೆ ಈ ಒಂದು ಲಕ್ಷ ಶ್ಲೋಕವನ್ನು ತಿಳಿಯಲು ಕಷ್ಟವಾಗಬಹುದು ಎಂದು, ಮಹಾಭಾರತದಿಂದ   ಅಮೂಲ್ಯವಾದ  ಎರಡು  ರಸವನ್ನು  ವೇದವ್ಯಾಸರು ನಮ್ಮ ಮುಂದೆ ಇರಿಸಿದ್ದಾರೆ, ಅದೇ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮ. 

          ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ  ಪ್ರಾಚೀನರು  ಭಗವದ್ಗೀತೆ  ಮತ್ತು ವಿಷ್ಣುಸಹಸ್ರನಾಮವನ್ನು  ಅತ್ಯಮೂಲ್ಯ ಗ್ರಂಥವಾಗಿ  ಪರಿಗಣಿಸಿದ್ದಾರೆ.  ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.

        ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ.   ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ  ಬರಲಾರದು.  ಗಾಯತ್ರಿ ಜಪವನ್ನು ಸಾಮಾನ್ಯವಾಗಿ ಒಂದು ಸಾವಿರದಂತೆ ದಿನಕ್ಕೆ ಮೂರು ಬಾರಿ ಮಾಡುತ್ತೇವೆ, ಏಕೆಂದರೆ ಗಾಯತ್ರಿಯಲ್ಲಿ 24  ಅಕ್ಷರಗಳಿವೆ. ಒಮ್ಮೆಗೆ ಒಂದು ಸಾವಿರ ಜಪ ಅಂದರೆ 24 ಸಾವಿರ ಅಕ್ಷರ, ದಿನಕ್ಕೆ ಮೂರು ಬಾರಿ ಅಂದರೆ 72 ಸಾವಿರ ಅಕ್ಷರ!  ಇದಕ್ಕಿಂತ ಹೆಚ್ಚು ಬಾರಿ ಪಾರಾಯಣ ಮಾಡಿದರೆ ಹುಚ್ಚು ಹಿಡಿಯುವ ಸಾಧ್ಯತೆ ಇದೆ !

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು  ಬ್ರಹತೀಸಹಸ್ರದ  72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ. 

      ಇಂತಹ ಅಮೂಲ್ಯವಾದ ಭಗವಂತನ ನಾಮವನ್ನು ಯಾರು ಯಾವಾಗ ಹೇಗೆ ಪಠಿಸಬಹುದು ?

ವಿಷ್ಣು ಸಹಸ್ರನಾಮ ವೇದವ್ಯಾಸರು ಮನುಷ್ಯನಿಗೆ ಕೊಟ್ಟ ಅಮೂಲ್ಯ ಕಾಣಿಕೆ. ಇದನ್ನು ಗಂಡು-ಹೆಣ್ಣು , ಜಾತಿ-ಮತದ ಭೇದವಿಲ್ಲದೆ ಎಲ್ಲರೂ ಎಲ್ಲಾ ಕಾಲದಲ್ಲೂ ಪಠಿಸಬಹುದು. ಬೆಳಿಗ್ಗೆ ಸ್ನಾನದ ಮೊದಲು, ಸ್ನಾನದ ನಂತರ, ಸಂಜೆ, ರಾತ್ರಿ ಯಾವಾಗ ಬೇಕಾದರೂ ಪಠಿಸಬಹುದು. ಅಲ್ಪಪ್ರಾಣ-ಮಹಾಪ್ರಾಣವನ್ನು ಸ್ಪಷ್ಟವಾಗಿಗೌರವಪೂರ್ವಕವಾಗಿ, ನಂಬಿಕೆಯಿಂದ, ಪರಿಶುದ್ಧ  ಮನಸ್ಸಿನಿಂದ  ಪಠಿಸುವುದು ಅತ್ಯಗತ್ಯ. ವಿಷ್ಣು ಸಹಸ್ರನಾಮದಲ್ಲಿ ನಮಗೆ ತಿಳಿಯದೆ ಆಗುವ ಉಚ್ಛಾರ ದೋಷಕ್ಕೆ ಕ್ಷಮೆ ಇದೆ. ಸರ್ವಶಬ್ದ ವಾಚ್ಯನಾದ ಭಗವಂತ ನಾವು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸುತ್ತಾನೆ.  

ಬನ್ನಿ...ಇಂತಹ ಅಮೂಲ್ಯ ಕೃತಿಯ ಅರ್ಥ ವಿಶ್ಲೇಷಣೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತೆರೆದು ನೋಡೋಣ.