Tuesday, December 21, 2010

Vishnu Sahasranama 950-958

ವಿಷ್ಣು ಸಹಸ್ರನಾಮ:
ಆಧಾರನಿಲಯೋಧಾತಾ ಪುಷ್ಪಹಾಸಃ ಪ್ರಜಾಗರಃ
ಊರ್ಧ್ವಗಸ್ಸತ್ಪಥಾಚಾರಃ ಪ್ರಾಣದಃ ಪ್ರಣವಃ ಪಣಃ
950) ಆಧಾರನಿಲಯಃ
ಇಡೀ ಜಗತ್ತಿನ ಆಧಾರ ಭಗವಂತ. ಆತ ಜಗತ್ತಿಗೆ ಶಾಶ್ವತ ನೆಲೆಕೂಡಾ ಹೌದು.
951) ಧಾತಾ(ಅಧಾತಾ)
ಜಗತ್ತನ್ನು ಧರಿಸಿ ಪೋಷಣೆ ಮಾಡುವ ಭಗವಂತ ಧಾತಾ. ಸಂಸಾರದಲ್ಲಿ ಜೀವರನ್ನು ಧರಿಸಿ, ಮುಕ್ತಿಯಲ್ಲಿ ಪೋಷಿಸುವ ಭಗವಂತ ಅಧಾತ ಕೂಡಾ ಹೌದು. ಏಕೆಂದರೆ ಆತನನ್ನು ಧರಿಸಿದ ಇನ್ನೊಂದು ಶಕ್ತಿ ಇಲ್ಲ. ತಾನೇ ತಾನಾಗಿ ನಿಂತು ವಿಶ್ವ ಧಾರಣೆ ಮಾಡಿದ ಭಗವಂತ ಅಧಾತ.   
952) ಪುಷ್ಪಹಾಸಃ
ಈ ನಾಮವನ್ನು ಕೇಳಿದ ತಕ್ಷಣ ಹೊಳೆಯುವ ಅರ್ಥ 'ಹೂವಿನಂತಹ ನಗುಮೊಗದವನು'. ಭಗವಂತನ ಮುಖದಲ್ಲಿ ಸದಾ ತುಂಬಿದ ಮಂದಹಾಸವಿರುತ್ತದೆ. ನೋಡಿದವರ ಹೃದಯವನ್ನು ಸೂರೆಗೊಳ್ಳುವ ಚೆಲುನಗು. ಭಗವಂತನ ಮೊಗದಲ್ಲಿ ನಗುವಿರದ ಕ್ಷಣವಿಲ್ಲ. ಮಹಾಭಾರತದ ಘೋರಯುದ್ಧದ ಮೊದಲು ಅರ್ಜುನ ಕುಸಿದುಬಿದ್ದಾಗಲೂ ಸಹ ಕೃಷ್ಣ ನಗುತ್ತಿದ್ದ! ಆತನ ನಗು ಎಲ್ಲರನ್ನೂ ಮರಳುಗೊಳಿಸುವ,ನಮ್ಮನ್ನು ಪರಿಪುಷ್ಟರನ್ನಾಗಿ ಮಾಡುವ ಮಾಂಗಲಿಕ ನಗು. ಇಂತಹ ನಗುವಿನ ಮೂರ್ತಿಯನ್ನು ನಮ್ಮ ಧ್ಯಾನದಲ್ಲಿ ಕಾಣುವ ಪ್ರಯತ್ನಮಾಡಬೇಕು.         
953) ಪ್ರಜಾಗರಃ
ಭಕ್ತ ಜನರ ಭಕ್ತಿಯ ಕರೆಗೆ ಸದಾ ಎಚ್ಚರದಲ್ಲಿದ್ದು ಕಾಯುವ ಭಗವಂತ ಎಂದೂ ನಿದ್ರಿಸುವುದಿಲ್ಲ. ಆತನ ನಿದ್ರೆ ಎಂದರೆ ಕೇವಲ ಯೋಗನಿದ್ರೆ. ಸೃಷ್ಟಿ-ಸ್ಥಿತಿಯಲ್ಲಿ ಜನರಕ್ಷಕನಾಗಿದ್ದು, ಪ್ರಳಯ ಕಾಲದಲ್ಲಿ ಪ್ರಜಾ 'ಗರಣ' ಮಾಡುವ ಭಗವಂತ ಮೋಕ್ಷಪ್ರದ.      
954) ಊರ್ಧ್ವಗಃ
ಭಗವಂತ  ಎಲ್ಲಕ್ಕಿಂತ ಮೇಲಿರುವವನು. ಗೀತೆಯಲ್ಲಿ ಹೇಳಿದಂತೆ:
ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್    ।
ಛನ್ದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್    ॥ ಅ-೧೫, ಶ್ಲೋ-೧॥
ಸಂಸಾರ ವೃಕ್ಷದ ಬುಡ ಭಗವಂತ. ಆತ ಸದಾ ಉನ್ನತಿಯಲ್ಲಿರುತ್ತಾನೆ.ನಾವು ಎತ್ತರಕ್ಕೇರಿದಾಗ(ಮುಕ್ತಿ), ಅಲ್ಲಿಯೂ ಕೂಡಾ ಆತ ಎತ್ತರದಲ್ಲಿದ್ದು ನಮ್ಮನ್ನು ಪೋಷಿಸುತ್ತಾನೆ. ಇಂತಹ ಭಗವಂತ. ಊರ್ಧ್ವಗಃ.
955) ಸತ್ಪಥಾಚಾರಃ
ಸತ್+ಪಥ ಎಂದರೆ ಪ್ರಾಚೀನ ಸಂಸ್ಕೃತದಲ್ಲಿ 'ನಕ್ಷತ್ರ-ಪಥ'. ನಕ್ಷತ್ರ ಪಥದಲ್ಲಿ ನೆಲಿಸಿದವನು, ನಕ್ಷತ್ರಪಥದ ಕೇಂದ್ರಬಿಂದು ಭಗವಂತ ಸತ್ಪಥಾಚಾರಃ. ಧ್ರುವ ನಕ್ಷತ್ರದಲ್ಲಿ ನೆಲೆಸಿರುವ ಶಿಂಶುಮಾರ ನಾಮಕ ಭಗವಂತ ನಕ್ಷತ್ರ ಪಥದ ಕೇಂದ್ರ. 'ಸತ್ಪಥ' ಎಂದರೆ ಸಜ್ಜನರು ನಡೆಯುವ ದಾರಿ, ಇಂತಹ ಸತ್ಪಥದ ನಡೆಯನ್ನು ನಡೆಸುವ ಭಗವಂತ ಸತ್ಪಥಾಚಾರಃ.
956) ಪ್ರಾಣದಃ
 ನಿಷ್ಕ್ರೀಯವಾದ ಜಡ ಪ್ರಪಂಚಕ್ಕೆ ಚಲನೆ ಕೊಟ್ಟ ಭಗವಂತ ಪ್ರಾಣದಃ. ಈ ಜಗತ್ತಿನ ಸಮಸ್ತ ಚಲನೆಯ ಮೂಲಶಕ್ತಿ.   "ಅಗ್ನಿಮೀಳೇ ಪುರೋಹಿತಂ " ಸ್ವತಃ ಚಲಿಸಲಾಗದ ಪ್ರಪಂಚಕ್ಕೆ ಚಲನೆ ಕೊಡುವ ಶಕ್ತಿ.
957) ಪ್ರಣವಃ
ಸರ್ವ ಶಬ್ಧಗಳಿಂದ ಸ್ತುತಿಸಲ್ಪಡುವವನು.ಮೂರು ಅವಸ್ಥೆಗಳಲ್ಲಿ(ಎಚ್ಚರ, ಕನಸು ಹಾಗು ನಿದ್ದೆ) ಮೂರು ರೀತಿಯ ಅನುಭೂತಿಯನ್ನು ಕೊಡುವ ಓಂಕಾರ ವಾಚ್ಯ ಭಗವಂತ ಪ್ರಣವಃ.
958) ಪಣಃ
ಜಗತ್ತಿನ ಸಮಸ್ತ ವ್ಯವಹಾರವನ್ನು ನಡೆಸುವವನು ಹಾಗು ಸಮಸ್ತ ಶಾಸ್ತ್ರಗಳಿಂದ ಸ್ತುತಿಸಲ್ಪ
ಡುವವನು. 

No comments:

Post a Comment