Monday, December 20, 2010

Vishnu sahasranama 916-923

ವಿಷ್ಣು ಸಹಸ್ರನಾಮ:
ಅಕ್ರೂರಃ ಪೇಶಲೋ ದಕ್ಷೋ ದಕ್ಷಿಣಃ, ಕ್ಷಮಿಣಾಂವರಃ 
ವಿದ್ವತ್ತಮೋ ವೀತಭಯಃ ಪುಣ್ಯಶ್ರವಣಕೀರ್ತನಃ
916) ಅಕ್ರೂರಃ
ಭಗವಂತ  ಎಂದೂ ಕ್ರೂರನಲ್ಲ. ಸಮಾಜದಲ್ಲಿ ಅನೇಕ ಕ್ರೂರ ಘಟನೆಗಳು ನಡೆಯುತ್ತವೆ. ಅದಕ್ಕೆ ಮೂಲ ಕಾರಣ ಮನುಷ್ಯನಲ್ಲಿರುವ ದುರಾಸೆ. ತನ್ನ ಆಸೆ ಈಡೇರದಿದ್ದಾಗ, ತಾನು ಅಂದುಕೊಂಡಂತೆ ಆಗದಿದ್ದಾಗ, ತನ್ನ ಕೆಲಸಕ್ಕೆ ಇನ್ನ್ಯಾರೋ ಅಡ್ಡಿಬಂದಾಗ ಮನುಷ್ಯ ಕ್ರೂರಿಯಾಗಿ ವರ್ತಿಸುತ್ತಾನೆ. ಆದರೆ ಭಗವಂತನಿಗೆ ಈಡೇರದ ಬಯಕೆ ಎನ್ನುವುದೊಂದಿಲ್ಲ. ಅವನು ಸತ್ಯಕಾಮ, ಸತ್ಯಸಂಕಲ್ಪ, ಪೂರ್ಣಕಾಮ. ಇಂತಹ ಭಗವಂತನಿಗೆ ಕೋಪವಿಲ್ಲ. ನಮಗೆ ಕ್ರೌರ್ಯವಾಗಿ ಕಾಣುವುದು ನಿಜವಾಗಿ ಕ್ರೂರತನವಲ್ಲ. ಅದರ ಹಿಂದೆ ಯಾವಾಗಲೂ ಪ್ರೀತಿ ಅಡಗಿರುತ್ತದೆ. ಭಗವಂತ ಎಂದೂ ನಿರ್ಧಯನಲ್ಲ. ಅವನಿಗೆ ಯಾರ ಮೇಲೂ ಹಗೆ ಇಲ್ಲ ಆತ ಅಕ್ರೂರಃ.            
917) ಪೇಶಲಃ
ಸರ್ವಾಂಗ ಸುಂದರ, ಚೆಲುವ, ಮುದ್ದು ಮುದ್ದಾದ ರೂಪವುಳ್ಳ ಭಗವಂತ ಪೇಶಲಃ. ಭಗವಂತನ ಈ ಅಪೂರ್ವ ಸುಂದರವನ್ನು ಆತನ ಕೃಷ್ಣಾವತಾರದಲ್ಲಿ ಕಾಣುತ್ತೇವೆ. ಗುಣದ ಸೌಂದರ್ಯದ ಪರಾಕಾಷ್ಠೆಯನ್ನು ಶ್ರೀರಾಮ ನಮಗೆ ತೋರಿಸಿಕೊಟ್ಟಿದ್ದಾನೆ. ಇಂದ್ರಾದಿ ದೇವತೆಗಳಿಗೆ ಈಶನಾಗಿ ಪಾಲನೆ ಮಾಡುವ ಲಾವಣ್ಯ ಮೂರ್ತಿ ಭಗವಂತ ಪೇಶಲಃ.    
918) ದಕ್ಷಃ
ಜಗತ್ತಿನಲ್ಲಿ   ಯಾವ-ಯಾವ ಕಾರ್ಯ ಯಾವ-ಯಾವ ಕಾಲದಲ್ಲಿ ಹೇಗೆ ಆಗಬೇಕೋ ಹಾಗೇ ಅದೇ ಕಾಲದಲ್ಲಿ ನಿಯಮಬದ್ಧವಾಗಿ ಮಾಡುವ ಸಾಮರ್ಥ್ಯವಿರುವ ಏಕೈಕ ಸ್ವರೂಪ ಭಗವಂತ ದಕ್ಷಃ.
919) ದಕ್ಷಿಣಃ
ದಕ್ಷೆತೆಯ ಜೊತೆಗೆ ದಾಕ್ಷಿಣ್ಯ(ಸೌಜನ್ಯ) ಸೇರಿದಾಗ ಅದು ದಕ್ಷಿಣಃ. ಭಗವಂತ ಸೌಜನ್ಯದ ಖನಿ. ಆದ್ದರಿಂದ ದಕ್ಷಿಣಃ  ಆತನಿಗೆ ಅನ್ವರ್ಥನಾಮ.  
920) ಕ್ಷಮಿಣಾಂವರಃ
ಭಗವಂತ ಕ್ಷಮಾಶೀಲರಲ್ಲಿ ಶ್ರೇಷ್ಠ. ನಾವು ಒಂದೊಂದು ಜನ್ಮದಲ್ಲಿ ಮಾಡುವ ಪಾಪ ನಮ್ಮ ಹತ್ತು ಜನ್ಮದಲ್ಲಿ ತೊಳೆಯಲು ಆಗದು. ಪ್ರತೀ ಜನ್ಮದಲ್ಲಿ ಪಾಪದ ಹೊರೆಯನ್ನು ಹೊತ್ತು ಸಾಗುವ ನಮ್ಮ ಪಾಪವನ್ನು ಕ್ಷಮಿಸಿ ಪಾಪದ ಹೊರೆಯಿಂದ ನಮ್ಮನ್ನು ಪಾರುಮಾಡುವ ಭಗವಂತ ಕ್ಷಮಾಮೂರ್ತಿ, ಆತ ಕ್ಷಮಿಣಾಂವರಃ  
921) ವಿದ್ವತ್ತಮಃ
ವಿದ್ವಾನ್ ಎಂದರೆ ತಿಳುವಳಿಕೆ ಉಳ್ಳವರು, ಜ್ಞಾನಿಗಳು. ಜ್ಞಾನಿಗಳಲ್ಲೆಲ್ಲಾ ಅತ್ಯಂತ ಉತ್ತಮ ಹಾಗು ಮಹಾ ಜ್ಞಾನಿ ಭಗವಂತ ವಿದ್ವತ್ತಮಃ.  
922) ವೀತಭಯಃ
ನಮ್ಮ ಭಯಕಳೆಯುವ, ಎಂದೂ ಭಯವಿರದ ಸರ್ವ ಸಮರ್ಥ ಭಗವಂತ ವೀತಭಯಃ
923) ಪುಣ್ಯಶ್ರವಣಕೀರ್ತನಃ
ಪುಣ್ಯಪ್ರದವಾದ ಶ್ರವಣ ಕೀರ್ತನಗಳವನು.ಭಗವಂತನ ಬಗ್ಗೆ ಕೇಳುವುದು, ಅವನ ಬಗ್ಗೆ ಮಾತನಾಡುವುದು, ಅವನತ್ತ ಮುಖ ಹಾಕಿ ನಡೆಯುವುದು ನಮ್ಮ ಬದುಕಿನ ಮಹಾ ಪಾವಿತ್ರ್ಯವಾದ ಕರ್ಮ. ಇದಕ್ಕಿಂತ ಉತ್ತಮವಾದದ್ದು ಇನ್ನೊಂದಿಲ್ಲ.  

No comments:

Post a Comment