Saturday, December 18, 2010

Vishnu Sahasranama 851-860

ವಿಷ್ಣು ಸಹಸ್ರನಾಮ :
ಭಾರಭೃತ್ ಕಥಿತೋ ಯೋಗೀ ಯೋಗೀಶಃ ಸರ್ವಕಾಮದಃ
ಆಶ್ರಮಃ ಶ್ರಮಣಃ, ಕ್ಷಾಮಃ ಸುಪರ್ಣೋ ವಾಯುವಾಹನಃ
851) ಭಾರಭೃತ್
 ಇಡೀ ಜಗತ್ತಿನ ಭಾರವನ್ನು ಹೊತ್ತ ಭಗವಂತ
ಭಾರಭೃತ್. ಆತ ಎಲ್ಲಾ ಶಾಸ್ತ್ರಗಳಲ್ಲಿ ನೆಲೆಸಿ ಎಲ್ಲಾ ವಂಶವನ್ನು ನಿರ್ವಹಣೆ ಮಾಡುವವನು.  
852) ಕಥಿತಃ
ಭಗವಂತನನ್ನು ಬೇರೆ ಬೇರೆ ಧರ್ಮ ಗ್ರಂಥಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆದರೂ ಕೂಡಾ ದೇವರು ಒಬ್ಬನೆ. ಯಾವ ಯಾವ ಮತದವರು, ಯಾವ ಯಾವ ದೇಶದವರು,
ಯಾವ ಯಾವ ಬಾಷೆಯವರು, ಯಾವ ಯಾವ ಶಬ್ಧದಿಂದ ಯಾರನ್ನು ಹೇಳುತ್ತಾರೋ ಆತ ಕಥಿತಃ. ಆತ ಎಲ್ಲರಿಂದಲೂ ದೇವರೆಂದು ಒಪ್ಪಿಕೊಂಡವನು.ಆತ ಎಲ್ಲಾ ಶಬ್ಧಗಳಿಂದ ಕಥಿತನಾದವನು.   
853) ಯೋಗೀ
ಸರ್ವಶಬ್ಧ ವಾಚ್ಯನಾದ ಭಗವಂತನಲ್ಲಿ ಎಲ್ಲಾ ಶಬ್ಧದ ಯೋಗಾರ್ಥ ಅಡಗಿದೆ. ಎಲ್ಲಾ ಗುಣಗಳ ಸಂಯೋಗ ಸಂಪೂರ್ಣವಾಗಿ ಅವನೊಬ್ಬನಲ್ಲಿರುವುದು. ಆದ್ದರಿಂದ ಆತ ಯೋಗೀ (Full of Attributes).    
 
854) ಯೋಗೀಶಃ
 ಯೋಗಾರ್ಥ ಅನ್ವಯವಾಗುವ ಅನೇಕ ಸಾಧಕರಿದ್ದಾರೆ, ದೇವತೆಗಳಿದ್ದಾರೆ. ಅವರೆಲ್ಲರ ಒಡೆಯನಾದ ಭಗವಂತ
ಯೋಗೀಶಃ. 
855) ಸರ್ವಕಾಮದಃಸರ್ವಕಾಮದಃ ಎಂದರೆ ಎಲ್ಲಾ ಬಯಕೆಗಳನ್ನೀಡೆರಿಸುವವನು.ನಾವು ನಮ್ಮ ಕಾಮನೆಯನ್ನು ಯಾರ್ಯಾರಲ್ಲೋ ಬೇಡುವ ಅಗತ್ಯವಿಲ್ಲ. ಎಲ್ಲವನ್ನು ಕೊಡುವವನು ಸರ್ವಕಾಮದಃ ಭಗವಂತ. ನಮ್ಮ ಎಲ್ಲಾ ಕಾಮನೆಗಳನ್ನು ಈಡೇರಿಸಬಲ್ಲವ ಭಗವಂತನೊಬ್ಬನೆ.
ನಮಗೆ ನಮ್ಮ ನಿಜವಾದ ಕಾಮನೆ ಏನು, ನಮಗೆ ಏನು ಬೇಕು, ಯಾವುದರಿಂದ ನಮಗೆ ಒಳಿತು ಎನ್ನುವ ಜ್ಞಾನ ಕೂಡಾ ಇಲ್ಲ. ಮಕ್ಕಳು ಅರಿವಿಲ್ಲದೆ ಆರೋಗ್ಯಕ್ಕೆ ಹಾನಿಕಾರಕವಾದ ಕೆಟ್ಟ ತಿಂಡಿತಿನಿಸನ್ನು ಬಯಸಿದಂತೆ ನಾವು ನಮಗರಿವಿಲ್ಲದೆ ಕೆಟ್ಟ ಕಾಮನೆಗೆ ಬಲಿಬಿದ್ದು, ಮೊಂಡುತನದಿಂದ, ಹಟದಿಂದ ಆಪತ್ತನ್ನು ತಂದುಕೊಳ್ಳುತ್ತೇವೆ. ಅದಕ್ಕಾಗಿ ನಾವು ಭಗವಂತನಲ್ಲಿ ಏನನ್ನೂ ಬೇಡದೆ ಆತನಲ್ಲಿ ಶರಣಾಗಬೇಕು. ನಮಗೇನುಬೇಕು ಎನ್ನುವುದು ನಮಗಿಂತ ಚನ್ನಾಗಿ ಭಗವಂತನಿಗೆ ಗೊತ್ತು. ಯಾವುದನ್ನೂ ಬಯಸದೇ, ಕೊಡದಿದ್ದನ್ನು ಏಕೆ ಕೊಡಲಿಲ್ಲ ಎಂದು ಕೇಳದೆ, ಕೊಟ್ಟಿದ್ದನ್ನು ಏಕೆ ಕೊಟ್ಟೆ ಎಂದು ಪ್ರಶ್ನಿಸದೇ ಪ್ರಸಾದವಾಗಿ ಸ್ವೀಕರಿಸಬೇಕು ಹಾಗು ಆತನಲ್ಲಿ ಶರಣಾಗಬೇಕು.          
 
856) ಆಶ್ರಮಃ
ಆಶ್ರಮ ಎನ್ನುವುದಕ್ಕೆ ಮುಖ್ಯವಾಗಿ ಎರಡು ಅರ್ಥಗಳಿವೆ. ನಮ್ಮ ಜೀವನದ ನಾಲ್ಕು ಮಜಲುಗಳು ಆಶ್ರಮ; ವಿರಕ್ತ ಜೀವನ ನಡೆಸುವವರು ವಾಸಮಾಡುವ ಪರ್ಣಕುಟೀರ ಆಶ್ರಮ. ಜೀವನದ ನಾಲ್ಕು ಮಜಲುಗಳೆಂದರೆ: ಬ್ರಹ್ಮಚರ್ಯ, ಗ್ರಹಸ್ಥಾಶ್ರಮ, ವಾನಪ್ರಸ್ಥ ಮತ್ತು ಸನ್ಯಾಸಾಶ್ರಮ.
ಮೊದಲನೆಯ ಆಶ್ರಮ ಬ್ರಹ್ಮಚರ್ಯ. ಬ್ರಹ್ಮ ಎಂದರೆ 'ವೇದ', 'ಚರ್ಯ' ಎಂದರೆ 'ಅಧ್ಯಯನ'. ಹಿಂದಿನ ಕಾಲದಲ್ಲಿ ಎಂಟು ವರ್ಷದಿಂದ ಇಪ್ಪತ್ನಾಲ್ಕು ವರ್ಷಗಳ ತನಕ ಗುರುಕುಲದಲ್ಲಿ ಸುಮಾರು ಹನ್ನೆರಡು ವರ್ಷ ಸಾಹಿತ್ಯ, ಸಂಗೀತ, ನೃತ್ಯ, ವೇದ, ವ್ಯಾಕರಣ,ಛಂದಸ್ಸು, ಧಾತು, ಪ್ರಾಣಿವಿದ್ಯೆ, ವೈದ್ಯವಿದ್ಯೆ, ಭೂತವಿದ್ಯೆ, ಕ್ಷತ್ರವಿದ್ಯೆ,ನಕ್ಷತ್ರವಿದ್ಯೆ, ಗ್ರಹವಿದ್ಯೆ, ಶಾಸ್ತ್ರ, ಪುರಾಣ, ಗಂದರ್ವವಿದ್ಯೆ, ಹೀಗೆ ಎಲ್ಲಾ ರೀತಿಯ ವಿದ್ಯೆಯನ್ನು ಕಲಿಸುತ್ತಿದ್ದರು. ಇದು ಬ್ರಹ್ಮಚರ್ಯ.
ವೇದ ವಿದ್ಯೆಯನ್ನು ಕಲಿತ ನಂತರ ಸುಮಾರು ಇಪ್ಪತ್ತರಿಂದ ಇಪ್ಪತ್ನಾಲ್ಕು ವಯಸ್ಸಿನಲ್ಲಿ ಮನೆ, ಮದುವೆ  ಹಾಗು ಹೆಂಡತಿ. ಈ ಸಮಯದಲ್ಲಿ ಕಲಿತ ವಿದ್ಯೆಯ ಅನುಷ್ಠಾನ. ಯಜ್ಞ ಯಾಗಾದಿಗಳು, ಅತಿಥಿಸತ್ಕಾರ, ಧಾನ-ಧರ್ಮ, ಪ್ರಾಣಿ ಸಂರಕ್ಷಣೆ ಹಾಗು ದಾಂಪತ್ಯ. ಇದು ಗ್ರಹಸ್ಥಾಶ್ರಮ.
ಮಕ್ಕಳಾಗಿ ಅವರು ದೊಡ್ಡವರಾದ ಮೇಲೆ, ಗೊಂದಲವಿಲ್ಲದ ಪ್ರಶಾಂತವಾದ ಕಾಡಿನಲ್ಲಿ ಹಣ್ಣು ಹಂಪಲನ್ನು ಬೆಳೆದು ತಮ್ಮ ವಿಷೇಶಾಧ್ಯಾಯನ ಮುಂದುವರಿಸುವ ಹಂತ ವಾನಪ್ರಸ್ಥ.
ಪೂರ್ಣ ಪ್ರಮಾಣದಲ್ಲಿ, ಯಾವ ಬದ್ದತೆಯೂ ಇಲ್ಲದೆ ಸದಾ ಭಗವಂತನ ಚಿಂತನೆಯಲ್ಲಿ ಕಳೆಯುವ ನಾಲ್ಕನೇ ಆಶ್ರಮ ಸನ್ಯಾಸಾಶ್ರಮ.
ಹೀಗೆ ನಾಲ್ಕು ಬಗೆಯ ಆಶ್ರಮವನ್ನು ನಿರ್ಮಿಸಿ ಆಶ್ರಮದಲ್ಲಿ ಬದುಕುವವವರನ್ನು ಪಾಲಿಸುವ, ಎಲ್ಲಾ ಬಗೆಯ ಜೀವನಕ್ರಮವನ್ನು ನಿಯಂತ್ರಿಸುವ, ವಿಶೇಷವಾಗಿ ತಪೋತಾಣಗಳಲ್ಲಿ ಸನ್ನಿಹಿತನಾಗಿರುವ, ಯಾವ ರೀತಿಯ ಶ್ರಮವಿಲ್ಲದ(ಆ+ಶ್ರಮ) ಭಗವಂತ ಆಶ್ರಮಃ.  
857) ಶ್ರಮಣಃ
ನಮ್ಮೆಲ್ಲರ ಶ್ರಮವನ್ನು, ಆಯಾಸವನ್ನು, ದುಃಖವನ್ನು, ಬಳಲಿಕೆಯನ್ನು ಪರಿಹರಿಸುವ ಭಗವಂತ ಶ್ರಮಣಃ.
'ಶ್ರಮಣ' ಎಂದರೆ 'ಸನ್ಯಾಸಿ' ಎನ್ನುವ ಇನ್ನೊಂದು ಅರ್ಥವಿದೆ; ನಾಲ್ಕನೇ ಆಶ್ರಮದಲ್ಲಿರುವವರು. ಭಗವಂತನಿಗೆ ಅತ್ಯಂತ ಪ್ರಿಯವಾದ ಆಶ್ರಮ ಶ್ರಮಣಾಶ್ರಮ. ಭಗವಂತನನ್ನು ಆಶ್ರಯಿಸಿಕೊಂಡು, ನಿರಂತರ ಭಗವಂತನ  ಚಿಂತನೆ ಮಾಡಿಕೊಂಡು, ಇಡೀ ಬದುಕನ್ನು ಭಗವಂತನಲ್ಲಿ ಅರ್ಪಿಸುವ ಶ್ರಮಣರಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಶ್ರಮಣಃ.    
858) ಕ್ಷಾಮಃ
ದುಷ್ಟರನ್ನು ಕ್ಷೀಣಿಸುವ, ಅಜ್ಞಾನ ಅತಿಯಾದಾಗ ಕ್ಷಾಮವನ್ನು(ಬರಗಾಲವನ್ನು) ಕೊಡುವ; ಕ್ಷಮಾಶೀಲರಲ್ಲಿ ಸನ್ನಿಹಿತನಾದ ಭಗವಂತ ಕ್ಷಾಮಃ. ನಮ್ಮ ಜೀವನದಲ್ಲಿ ಕ್ಷಮಾಗುಣ ಅತ್ಯಂತ ಮಹತ್ವದ ಗುಣ. ಇದು ದಾನ ಧರ್ಮದಷ್ಟೇ ಹಿರಿದಾದ ಗುಣ. ಸಾಮರ್ಥ್ಯವಿದ್ದೂ  ಕ್ಷಮಿಸುವುದು ನಿಜವಾದ ಕ್ಷಮೆ. ಮಹಾಭಾರತದ ಧರ್ಮರಾಯನಲ್ಲಿ ಈ ಗುಣವನ್ನು ಕಾಣುತ್ತೇವೆ. ಭಗವಂತನಿಗೆ ಕ್ಷಮಾಗುಣ ಉಳ್ಳವರು ಅತಿಪ್ರಿಯ.  
859) ಸುಪರ್ಣಃ
ಸು+ಪ+ಣ-ಸುಪರ್ಣ; ಅಂದರೆ ನಿತ್ಯಾನಂದನಾದ, ಪರಿಪೂರ್ಣ ಆನಂದ ಸ್ವರೂಪಿ ಭಗವಂತ. ಸುಪರ್ಣ ಎಂದರೆ ಹಕ್ಕಿ, ಗರುಡನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಗರುಡವಾಹನ ಭಗವಂತ ಸುಪರ್ಣಃ.
860) ವಾಯುವಾಹನಃ
ಹೆಣ್ಣಿನ ದೇಹದಲ್ಲಿ ಒಂದು ಪುಟ್ಟ ಜೀವದ ಅಧಿಷ್ಠಾನ ಆಗುವುದು, ಪ್ರಾಣದೇವರ ವಾಹನನಾಗಿ ಭಗವಂತ ಬಂದು ಗರ್ಭದಲ್ಲಿ ಕುಳಿತಾಗ. ಅದಕ್ಕಾಗಿ ದೇವಸ್ಥಾನದಲ್ಲಿ ದೇವರ ಮೂಲ ಗ್ರಹ ಹಾಗು ಗರ್ಬಿಣಿಯ ಹೊಟ್ಟೆಯನ್ನು ಏಕ ಶಬ್ಧದಿಂದ 'ಗರ್ಭ' ಅಥವಾ 'ಗರ್ಭಗುಡಿ' ಎಂದು ಕರೆಯುತ್ತಾರೆ. ನಮ್ಮೊಳಗೆ ಪ್ರಾಣ-ನಾರಾಯಣರಿದ್ದರೆ ಮಾತ್ರ ಜೀವ. ಇಲ್ಲದಿದ್ದರೆ ಶವ! ಭಗವಂತನ ಜೊತೆಗೆ ಸದಾ ವಾಹನನಾಗಿರುವ ನಿತ್ಯ ಸಂಗಾತಿ ಪ್ರಾಣದೇವರು. ಇಂತಹ ವಾಯುದೇವರನ್ನು ವಾಹನವನ್ನಾಗಿಸಿಕೊಂಡು ನಮ್ಮೊಳಗೆ ಅಂತರ್ಯಾಮಿಯಾಗಿರುವ ಭಗವಂತ
ವಾಯುವಾಹನಃ

No comments:

Post a Comment