Wednesday, December 1, 2010

Vishnu Sahasranama 745-750

ವಿಷ್ಣು ಸಹಸ್ರನಾಮ:
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ
745) ವೀರಹಾ
ವೀರ+ಹಾ; ಅಂದರೆ ವೀರರ ಸಂಹಾರ ಮಾಡುವವನು! ಈ ನಾಮ 'ಜನಾರ್ದನ' ಎನ್ನುವ ನಾಮದಂತೆ. ಅಲ್ಲಿ 'ಜನ' ಎಂದರೆ 'ದುರ್ಜನ' ಇಲ್ಲಿ ವೀರ ಎಂದರೆ 'ತನ್ನ ಪರಾಕ್ರಮವನ್ನು ದುರ್ಬಲ ಜನರ ಮೇಲೆ ದಬ್ಭಾಳಿಕೆಯಾಗಿ ಉಪಯೋಗಿಸುವವರು'. ವಿ+ಈರ, ಅಂದರೆ ಈರನಿಗೆ(ಪ್ರಾಣನಿಗೆ) ವಿರುದ್ಧವಾಗಿ ನಿಲ್ಲುವ ಲೋಕಕಂಟಕರು. ಇಂತಹ ಸಮಾಜಕಂಟಕರನ್ನು ಸಂಹಾರ ಮಾಡುವ ಭಗವಂತ ವೀರಹಾ.
746) ವಿಷಮಃ (ಅವಿಷಮಃ)
ಭಗವಂತ ವಿಷಮಃ, ಏಕೆಂದರೆ ಆತ ಯಾರಿಗೂ ಏಕ ರೂಪದಲ್ಲಿ ಏನನ್ನೂ ಕೊಡುವುದಿಲ್ಲ. ಆಯಾ ಜೀವಧರ್ಮಕ್ಕನುಗುಣವಾಗಿ ಭಗವಂತ ಸೃಷ್ಟಿ ನಿರ್ಮಾಣ ಮಾಡಿದ್ದಾನೆ. ಆದರೆ ಆತ ಅವಿಷಮಃ, ಏಕೆಂದರೆ ಆತನಿಗೆ ಯಾರ ಮೇಲೂ ದ್ವೇಷವಿಲ್ಲ; ಎಲ್ಲರೂ ಆತನಿಗೆ ಒಂದೇ.  
747) ಶೂನ್ಯಃ
ಕ್ಷ+ಊನ+ಯಾ-ಶೂನ್ಯಕ್ಷ+ಊನ-ಶೂನ ಅಂದರೆ 'ಆನಂದಹೀನ'; 'ಯಾ' ಎಂದರೆ ನಿಯಂತ್ರಿಸುವವ. ಆನಂದದಿಂದ ಊನವಾಗಿರುವ ಜೀವರನ್ನು ಜ್ಞಾನ ಕೊಟ್ಟು ನಿಯಂತ್ರಿಸುವ ಭಗವಂತ ಶೂನ್ಯಃ.  ನಾವು  ಆನಂದದಿಂದ ಊನವಾಗಿರಲು ಕಾರಣ ನಮ್ಮ ಅಜ್ಞಾನ. ಮನುಷ್ಯ ಸಾಮಾನ್ಯವಾಗಿ ಇನ್ನೊಬ್ಬರಿಂದ ನನಗೆ ಸುಖ ಸಿಗಬಹುದು ಎಂದು ಬಯಸುತ್ತಾನೆ. ಆದರೆ ಇದೇ ಮೂಲ ದುಃಖಕ್ಕೆ ಕಾರಣ. ತನ್ನೊಳಗೆ ನಿಜವಾದ ಸುಖ ಅಡಗಿದೆ ಎಂದು ತಿಳಿಯದೆ ಸುಖವನ್ನು ಅರಸುತ್ತ ಎಲ್ಲೆಲ್ಲೋ ಹೋಗುವುದು, ಬೇರೆಡೆಯಲ್ಲಿ ಸುಖವಿದೆ ಎನ್ನುವ ಭ್ರಮೆಯಿಂದಲೇ ದುಃಖಪಡುವುದು. ಇಂತಹ ಶೂನರಿಗೆ ಜ್ಞಾನವನ್ನು ಕೊಟ್ಟು ಉದ್ಧಾರ ಮಾಡುವ ಭಗವಂತ ಶೂನ್ಯಃ.
748) ಘೃತಾಶೀಃ
ಆಸೆಗಳೇ ಇಲ್ಲದ ಬೆಳಗುವ ಇಚ್ಛಾರೂಪಿ ಭಗವಂತ ಘೃತಾಶೀಃ.
ಆತ ತುಪ್ಪ ತಿನ್ನುವವನು ಎನ್ನುವ ಮೇಲ್ನೋಟದ ಅರ್ಥವನ್ನು ಈ ನಾಮ ಕೊಡುತ್ತದೆ. ಅಂದರೆ ಭಗವಂತ ಭಕ್ತಿಯಿಂದ ಕೊಡುವ ಯಾವುದೇ ಹವಿಸ್ಸನ್ನು ಸ್ವೀಕರಿಸುತ್ತಾನೆ ಎಂದರ್ಥ. ಹೋಮ ಮಾಡುವಾಗ ನಮ್ಮ ಪಿಂಡಾಂಡದ 360 ಆಸ್ತಿಗಳನ್ನು, ಕಾಲ ಚಕ್ರದ 360 ದಿನಗಳನ್ನು ಬಿಂಬಿಸುವ 360  ಇಟ್ಟಿಗೆಯಿಂದ ಹೋಮ ಕುಂಡ ನಿರ್ಮಾಣ ಮಾಡಿ, ಅದರಲ್ಲಿ ಅಗ್ನಿಯನ್ನು ಆಹ್ವಾನ ಮಾಡಿ, ಗರ್ಭದಾನ, ಜನನ, ನಾಮಕರಣ ಅನ್ನಪ್ರಾಶನ ಉಪನಯನ ಇತ್ಯಾದಿ ಶೋಡಷ ಸಂಸ್ಕಾರವನ್ನು ಅಗ್ನಿಗೆ ಮಾಡುತ್ತಾರೆ. ಉರಿಯುವ ಅಗ್ನಿ ಜೀವ ಚೈತನ್ಯದ ಸ್ವರೂಪ. ಇಂತಹ ಅಗ್ನಿಯಲ್ಲಿ ಕಣ್ಣು ಬಾಯಿಯ ಪರಿಕಲ್ಪನೆ ಮಾಡಿ, ಮೊದಲು ಅಗ್ನಿ-ಸೋಮರ ಪ್ರತಿರೂಪವಾಗಿ ಚಕ್ಷುರ್ಹೋಮ (ಕಣ್ಣಿಗೆ ತುಪ್ಪದ ಅರ್ಪಣೆ) ಮಾಡಿ ಆನಂತರ ಬಾಯಿಗೆ ತುಪ್ಪವನ್ನು ಅರ್ಪಿಸುತ್ತಾರೆ. ಇದು ಅಗ್ನಿ ಮತ್ತು ಸೋಮರ ಅಂತರ್ಗತನಾಗಿ ಜಗತ್ತನ್ನು ನಡೆಸುವ, ಅಗ್ನಿ  ಮುಖೇನ ತುಪ್ಪವನ್ನು  ಆಹುತಿಯಾಗಿ ಸ್ವೀಕರಿಸುವ  ಭಗವಂತನ ಪರಿಕಲ್ಪನೆ.      
749) ಅಚಲಃ
ಸರ್ವವ್ಯಾಪ್ತನಾದ ಭಗವಂತ ಅಚಲಃ
750) ಚಲಃ
ಎಲ್ಲಾ ಕಡೆಯೂ ಚಲಿಸುವವನು! [ಈ ರೀತಿಯ ವರ್ಣನೆ ಭಗವಂತನಿಗಲ್ಲದೆ ಇನ್ಯಾವುದೇ ವಸ್ತುವಿಗೆ ಮಾಡಲು ಸಾಧ್ಯವಿಲ್ಲ.  It moves (ಚಲಃ) ; it moves not(
ಅಚಲಃ)]   

No comments:

Post a Comment