Tuesday, December 21, 2010

Vishnu Sahasranaama 924-932

ವಿಷ್ಣು ಸಹಸ್ರನಾಮ:
ಉತ್ತಾರಣೋ ದುಷ್ಕೃತಿಹಾ ಪುಣ್ಯೋ ದುಃಸ್ವಪ್ನನಾಶನಃ
ವೀರಹಾ ರಕ್ಷಣಸ್ಸಂತೋ ಜೀವನಃ ಪರ್ಯವಸ್ಥಿತಃ 
924) ಉತ್ತಾರಣಃ
ಸಂಸಾರದಿಂದ ನಮ್ಮನ್ನು ಮೇಲೆತ್ತಿ ಪಾರುಮಾಡುವ ಭಗವಂತ ಉತ್ತಾರಣಃ. ಸಂಸಾರವೆಂಬ ಈ ಮಹಾ ಕಡಲಿನಲ್ಲಿ ದಡಸಿಗದೆ ಒದ್ದಾಡುತ್ತಿರುವ ನಮ್ಮನ್ನು ದಡಸೇರಿಸುವ ಏಕೈಕ ಶಕ್ತಿ.
925) ದುಷ್ಕೃತಿಹಾ
ನಮ್ಮ ಪಾಪಗಳನ್ನು ಪರಿಹರಿಸುವವನು. ದುಷ್ಟರನ್ನು ಪಾಪಿಗಳನ್ನು ಕೊಲ್ಲುವವನು.
926) ಪುಣ್ಯಃ
ಪುಣ್ಯ ಎಂದರೆ ಪಾವನ ಅಥವಾ ಪರಮ ಸುಂದರ. ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು ಧರ್ಮರಾಯನಿಗೆ ಹೇಳುವ ಮೊದಲು ಈ ರೀತಿ ಹೇಳುತ್ತಾರೆ ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್. ಭಗವಂತನ ನಾಮಕ್ಕೇ ಅಷ್ಟೊಂದು ಭಲವಿರುವಾಗ ಇನ್ನು ಆತನನ್ನು ನಾವು ಊಹಿಸುವುದೂ ಕಷ್ಟ. ಆತ ಪವಿತ್ರ ಹಾಗು ಪರಮ ಸುಂದರ. ಆತ ಪುಣ್ಯಃ. ಅಗ್ನಿ ಮತ್ತು ತೀರ್ಥಗಳಲ್ಲಿ ಶುದ್ಧಿಕಾರಕನಾಗಿ, ಪಾವನನನಾಗಿ ತುಂಬಿದ ಭಗವಂತ ಪುಣ್ಯಃ. ನಮ್ಮೊಳಗೆ  ನಿಂತು ನಮ್ಮಿಂದ ಪುಣ್ಯ ಕರ್ಮಗಳನ್ನು ಮಾಡಿಸಿ ಮೋಕ್ಷ ಕೊಡುವ ಭಗವಂತ ಪುಣ್ಯಃ.  
927) ದುಃಸ್ವಪ್ನನಾಶನಃ
ನಮಗೆ ಕನಸು ಬೀಳುತ್ತದೆ, ಎಲ್ಲಾ ಕನಸುಗಳಿಗೆ ಅರ್ಥವಿದೆ ಎಂದು ಹೇಳುವುದಕ್ಕೆ ಬರುವುದಿಲ್ಲ. ಆದರೆ ಅಪರೂಪಕ್ಕೆ ಬೀಳುವ ಕನಸು, ಬೆಳಗಿನ ಜಾವದ ಕನಸು ಅರ್ಥಪೂರ್ಣವಾಗಿರುತ್ತದೆ.  ಕೆಲವರು  ರಾತ್ರಿಯಿಂದ ಬೆಳಗಿನತನಕ ಕನಸಿನಲ್ಲೇ ಇರುತ್ತಾರೆ, ಇದು ಕೇವಲ ಮಾನಸಿಕ ಸಮಸ್ಯೆ. ಕೆಲವು ಅರ್ಥಪೂರ್ಣ ಕನಸು ನಮಗೆ ನಮ್ಮ ಜೀವನದಲ್ಲಿ ಮುಂದೆ ಆಗತಕ್ಕಂತಹ ಒಳಿತು ಕೆಡುಕುಗಳ ಬಗ್ಗೆ ಮುನ್ಸೂಚನೆ ಕೊಡುತ್ತವೆ. ಇನ್ನು ಕೆಲವೊಮ್ಮೆ ನಮಗೆ ಕನಸಿನ ಮುಖೇನ ದೈವವಾಣಿ (Divine message)  ಕೂಡಾ ಬರುತ್ತದೆ. ಕನಸಿಗೆ ಅದರದ್ದೇ ಆದ ಬಾಷೆ ಇದೆ. ಇದನ್ನು ಕನಸಿನ ಮನಃಶಾಸ್ತ್ರ (Dream Psychology) ಎನ್ನುತ್ತಾರೆ. ಇದನ್ನು ಪುರಾಣಗಳಲ್ಲಿ, ಉಪನಿಷತ್ತಿನಲ್ಲಿ ವಿವರವಾಗಿ ಹೇಳಿದ್ದಾರೆ. ಕನಸಿನಲ್ಲಿ ಬಣ್ಣಕ್ಕೆ ವಿಶೇಷ ಅರ್ಥವಿದೆ. ಉದಾಹರಣೆಗೆ ಕನಸಿನಲ್ಲಿ ಬಿಳಿ ಬಣ್ಣದ ಯಾವ ವಸ್ತುವನ್ನು ಕಂಡರೂ ಅದು ಮುಂದೆ ಆಗತಕ್ಕ ಶುಭವನ್ನು ಸೂಚಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಂಪುಬಣ್ಣದ ಯಾವ ವಸ್ತುವನ್ನು ಕಂಡರೂ ಕೆಟ್ಟದ್ದು. ಕನಸಿನ 'ಕೆಂಪು' ಸಾವಿನ ಸಂಕೇತ. ಕೆಂಪು ತಾವರೆಯ ಒಂದೇ ಹೂ ಕನಸಿನಲ್ಲಿ ಯಾವಾಗಲೂ ಬಂದರೆ ಖಂಡಿತವಾಗಿಯೂ ಅದು ಸಾವಿನ ಸಂಕೇತ. ಎಣ್ಣೆ ಹಾಕಿ ಅಭ್ಯಂಜನ ಸ್ನಾನಮಾಡಿದಂತೆ ಕನಸು ಬಿದ್ದರೆ ಒಳ್ಳೆಯದು, ಮೈತುಂಬ ಎಣ್ಣೆ ಹಚ್ಚಿದಂತೆ ಕನಸುಬಿದ್ದರೆ ಅದು ರೋಗದ ಮುನ್ಸೂಚನೆ. ಇನ್ನು 'ದಿಕ್ಕು'; ಕನಸಿನಲ್ಲಿ ಪೂರ್ವಕ್ಕೆ ಅಥವಾ  ಉತ್ತರಕ್ಕೆ ನಡೆದುಕೊಂಡು ಹೋದಂತೆ ಕನಸುಬಿದ್ದರೆ ಒಳ್ಳೆಯದು. ಆದರೆ ಒಂದುವೇಳೆ ದಕ್ಷಿಣ ದಿಕ್ಕಿಗೆ ನಡೆದುಕೊಂಡು ಹೋದಂತೆ ಕನಸುಬಿದ್ದರೆ ಅದು ಪರಲೋಕ ಯಾತ್ರೆಯ ಸಂಕೇತ!  ಬಿಳಿ ಆನೆ ಒಳ್ಳೆಯದು, ಕಪ್ಪು ಆನೆ ಕೆಟ್ಟದ್ದು. ಇನ್ನು ಕೆಲವೊಮ್ಮೆ ಮುಂದೆ ಆಗುವ ಯಥಾಸ್ಥಿತಿ ಕನಸಿನಲ್ಲಿ ಬರುತ್ತದೆ. ಹೀಗೆ ಕನಸು ನಮಗೆ ಮುಂದೆ ಆಗುವ ಅನಿಷ್ಟದ ಎಚ್ಚರಿಕೆ ಕೂಡಾ ಹೌದು. ಅದಕ್ಕೆ ಸರಿಯಾದ ಪರಿಹಾರ ಕಂಡುಕೊಳ್ಳಲು ಅವಕಾಶ ಕೂಡಾ ಹೌದು. ಈ ರೀತಿ ದುಃಸ್ವಪ್ನ ಬಿದ್ದಾಗ ಆ ಬಗ್ಗೆ ಎಂದೂ ಭಯಪಡಬೇಕಾಗಿಲ್ಲ. ಏಕೆಂದರೆ ಇದು ಭಗವಂತ ನಮಗೆ ಕೊಟ್ಟ ಮುನ್ಸೂಚನೆ.  ಇಂತಹ ಸಂಧರ್ಭದಲ್ಲಿ ಆ ಭಗವಂತನಲ್ಲಿ ಸಂಪೂರ್ಣ ಶರಣಾದರೆ ಆತ ಖಂಡಿತವಾಗಿ ನಮಗೆ ಪರಿಹಾರವನ್ನು ತೋರಿಸುತ್ತಾನೆ. ಮುಂದೆ ಆಗತಕ್ಕಂತಹ ಅನಿಷ್ಟದಿಂದ ನಮ್ಮನ್ನು ಪಾರು ಮಾಡುತ್ತಾನೆ. ಇಂತಹ ಭಗವಂತನಿಗೆ ದುಃಸ್ವಪ್ನನಾಶನಃ ಅನ್ವರ್ಥನಾಮ.  
928) ವೀರಹಾ
ವೀರ+ಹಾ-ವೀರಹಾ; ಯಾರ ಪೌರುಷ ಸಮಾಜಭಾದಕವೋ ಅಂತಹ ಲೋಕಕಂಟಕರನ್ನು ನಾಶ ಮಾಡುವ ಭಗವಂತ ವೀರಹಾ. ಇಷ್ಟೇ ಅಲ್ಲ, ಲೋಕಕಂಟಕರಿಗೆ ಸಹಾಯಕನಾಗಿ ನಿಲ್ಲುವವರನ್ನೂ ಕೂಡಾ ಭಗವಂತ ನಿಗ್ರಹ ಮಾಡುತ್ತಾನೆ. ಕೆಲವೊಮ್ಮೆ ಕಾರುಣ್ಯದಿಂದ ಇನ್ನು ಕೆಲವೊಮ್ಮೆ ಧರ್ಮ ರಕ್ಷಣೆಗಾಗಿ. ಶ್ರೀ ಕೃಷ್ಣ - ಭೀಷ್ಮ, ದ್ರೋಣರನ್ನು ಕೊಲ್ಲುವ ಮುಖೇನ ಅಂಥಹ ಧಿವ್ಯ ಚೇನತ ಮತ್ತೆ ತಪ್ಪು ಮಾಡಿ ಪಾಪ ಕಟ್ಟಿಕೊಳ್ಳದಂತೆ ತಡೆದ.
ವೀರೇಶು ಹಂತಿ ಗಚ್ಛತಿ. ವೀರರಲ್ಲಿ ಸನ್ನಿಹಿತನಾಗಿರುವ ಭಗವಂತ ವೀರಹಾ. 
929) ರಕ್ಷಣಃ
ಇಡೀ ಜಗತ್ತಿನ ಸಂರಕ್ಷಕ ಭಗವಂತ ರಕ್ಷಣಃ.
930) ಸಂತಃ
ಅನೇಕ ರೂಪದಲ್ಲಿ ಸಜ್ಜನರೊಳಗೆ ತುಂಬಿ ಪಾಲನೆ ಮಾಡುವ ಭಗವಂತ  ಸಂತಃ. ಆತ "ಸಮ್ಯಕ್ ತತಃ" ಎಲ್ಲೆಡೆಯೂ ವ್ಯಾಪ್ತನಾದವನು. 
931) ಜೀವನಃ
ಪ್ರತಿಯೊಬ್ಬರಿಗೂ ಬದುಕು ಕೊಡುವವ. ಜಗತ್ತಿನ ಸಮಸ್ತ ಜೀವ ಜಾತಕ್ಕೆ ಬದುಕು ಕೊಡುವ ಪ್ರತಿಯೊಂದು ಜೀವವನ್ನು ನಿಯಂತ್ರಿಸುವ ಭಗವಂತ ಜೀವನಃ.
932) ಪರ್ಯವಸ್ಥಿತಃ
ಎಲ್ಲೆಡೆ ನೆಲೆಸಿರುವವನು, ನಮ್ಮ ಪಂಚ ಕೋಶದಲ್ಲಿ, ಪಂಚ ಜ್ಞಾನೇಂದ್ರಿಯದಲ್ಲಿ, ಪಂಚಪ್ರಾಣದಲ್ಲಿ, ಪಂಚ ಭೂತದಲ್ಲಿ ಪಂಚ ರೂಪದಲ್ಲಿ ಅನಂತರೂಪದಲ್ಲಿ ತುಂಬಿರುವ ಭಗವಂತ
ಪರ್ಯವಸ್ಥಿತಃ.

No comments:

Post a Comment