Thursday, December 2, 2010

Vishnusahasranama 751-755

ವಿಷ್ಣು ಸಹಸ್ರನಾಮ:
ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್
751) ಅಮಾನೀ
ಅ+ಮಾನೀ; ಅಂದರೆ ಮಾನ ಇಲ್ಲದವನು! ಇಲ್ಲಿ ಮಾನ ಎಂದರೆ ಅಭಿಮಾನ(Attachment); 'ನನ್ನದು' ಎನ್ನುವ ಕ್ಷುದ್ರ ಮನೋವೃತ್ತಿ. ಇಂದ್ರಾದಿ ದೇವತೆಗಳಿಗೂ ಕೂಡಾ ಅಭಿಮಾನವಿದೆ, ಆದರೆ ಭಗವಂತನಿಗೆ ಇಂತಹ ಯಾವುದೇ ಅಭಿಮಾನವಿಲ್ಲ. ಇನ್ನು 'ಮಾನ' ಎಂದರೆ ನಾಶ, ಅಳತೆ, ಎನ್ನುವ ಅರ್ಥ ಕೂಡಾ ಇದೆ. ಅಳತೆಗೆ ಸಿಗದ (immeasurable), ನಾಶವಿಲ್ಲದ,
ಯಾವುದೇ ಅಭಿಮಾನವಿಲ್ಲದ  ಅನಂತ ತತ್ವ ಭಗವಂತ ಅಮಾನೀ.
752) ಮಾನದಃ
ನಮಗೆ ಅಭಿಮಾನವನ್ನು ಕೊಡುವವನು ಹಾಗು ನಮ್ಮ ಅಭಿಮಾನವನ್ನು(Ego) ಕಳಚುವವನು. ನಮ್ಮ ಅಹಂಕಾರ ನಾಶಮಾಡುವ ಭಗವಂತ
ಮಾನದಃ.
753) ಮಾನ್ಯಃ
ಎಲ್ಲರಿಂದಲೂ ಪೂಜ್ಯನಾದ ಭಗವಂತ
ಮಾನ್ಯಃ. ಭಗವಂತನನ್ನು ದ್ವೇಷಿಸುವವರು ಅಂತತಃ ಆತನನ್ನು ಹೆಚ್ಚು ನೆನೆಯುತ್ತಾರೆ! ಕಂಸನಿಗೆ ಕನಸಿನಲ್ಲಿ, ಎಚ್ಚರದಲ್ಲಿ, ನಿದ್ದೆಯಲ್ಲಿ, ಎಲ್ಲೆಲ್ಲೂ ಕೃಷ್ಣನೇ ಕಾಣುತ್ತಿದ್ದನಂತೆ. ನಾಸ್ತಿಕರು ದೇವರನ್ನು ದ್ವೇಷಿಸುವ ಭ್ರಮೆಯಲ್ಲಿ ಯಾವಾಗಲೂ ದೇವರ ಬಗ್ಗೆಯೇ ಚಿಂತಿಸುತ್ತಾರೆ. ಕೆಲವರಿಗೆ ಉಪಾಸನೆ ಮಾಡಲು, ಕೆಲವರಿಗೆ ನಿರಾಕರಣೆ ಮಾಡಲು, ಕೆಲವರಿಗೆ ಪ್ರೀತಿಮಾಡಲು, ಇನ್ನು ಕೆಲವರಿಗೆ ದ್ವೇಷಿಸಲು, ಹೀಗೆ ಎಲ್ಲರಿಗೂ ಭಗವಂತ ಮಾನ್ಯ.     
754) ಲೋಕಸ್ವಾಮೀ
ಈ ನಾಮಕ್ಕೆ ವಿಶೇಷ ವಿಶ್ಲೇಷಣೆಯ ಅಗತ್ಯವಿಲ್ಲ, ಕೇಳಿದಾಕ್ಷಣ ಅದರ ಅರ್ಥ ಹೊಳೆಯುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡಾ ನಾನು-ನನ್ನಿಂದ ಎನ್ನುವ ಭ್ರಮೆಯಲ್ಲಿರುತ್ತಾರೆ. ಆದರೆ ಎಲ್ಲವನ್ನೂ ಮಾಡಿಸುವ ಪರಶಕ್ತಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಈ ಲೋಕಕ್ಕೆ ಭಗವಂತನೊಬ್ಬನೇ ನಿಜವಾದ ಸ್ವಾಮಿ. ನಾನು-ನನ್ನದು ಎನ್ನುವುದು ಕೇವಲ ತಿಳಿಗೇಡಿತನ. ಇದನ್ನೇ ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:
ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ |
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ (ಅ-೧೮, ಶ್ಲೋ-೧೬)
“ಏನೂ ಮಾಡದ ತನ್ನನ್ನು ಮಾಡುವವನು ಎಂದು (ತಾನೊಬ್ಬನೇ ಎಲ್ಲವನ್ನು ಮಾಡಿದವನು ಎಂದು) ತಿಳಿದವನು ಬುದ್ಧಿಗೇಡಿ. ಅಂತಹ ತಿಳಿಗೇಡಿಗಳಿಗೆ  ಏನೂ ತಿಳಿದಿಲ್ಲ”. ಆದ್ದರಿಂದ ಭಗವಂತನನ್ನು ಬಿಟ್ಟರೆ ಬೇರೆ ಯಾರೂ ಸ್ವಾಮಿ ಶಬ್ಧಕ್ಕೆ ಅರ್ಹರಲ್ಲ.
ಲೋಕ ಎಂದರೆ ಜ್ಞಾನಿ ಎನ್ನುವ ವಿಶೇಷ ಅರ್ಥವಿದೆ. ಭಗವಂತ ಎಲ್ಲರಿಗೂ ಸ್ವಾಮಿಯಾದರೂ ಕೂಡಾ ಜ್ಞಾನಿಗಳಿಗೆ ವಿಶೇಷ ಸ್ವಾಮಿ. ಏಕೆಂದರೆ ಇರುವಿಕೆ ಮುಖ್ಯವಲ್ಲ, ಇರವಿನ ಅರಿವು ಮುಖ್ಯ. ಆದ್ದರಿಂದ ಭಗವಂತ 'ಲೋಕಸ್ವಾಮಿ' ಎಂದು ತಿಳಿದ ಜ್ಞಾನಿಗಳಿಗೆ ಆತ ನಿಜವಾದ ಸ್ವಾಮಿ. ಉಳಿದವರು ಅರಿವಿಲ್ಲದೆ ಅವನನ್ನು ಕಳೆದುಕೊಳ್ಳುತ್ತಾರೆ.     
755) ತ್ರಿಲೋಕಧೃಕ್
ಮೂರು ಲೋಕವನ್ನು ಧರಿಸಿದ ಭಗವಂತ
ತ್ರಿಲೋಕಧೃಕ್. ಪ್ರಾಚೀನರು ಬ್ರಹ್ಮಾಂಡವನ್ನು ಹದಿನಾಲ್ಕು ವಿಭಾಗವಾಗಿ ವಿಂಗಡಿಸಿದ್ದರು . ಅಳ, ವಿಳ, ಸುಳ, ತಳಾತಳ, ರಸಾತಳ, ಮಹಾತಳ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ತಪೋಲೋಕ, ಮಹಾಲೋಕ, ಜನರ್ಲೋಕ ಮತ್ತು ಸತ್ಯಲೋಕ. ಹದಿನಾಲ್ಕು ಲೋಕಗಳನ್ನೊಳಗೊಂಡ ಮೂರು ಪ್ರಮುಖ ಲೋಕಗಳೇ ತ್ರಿಲೋಕಗಳು. 'ಭೂಲೋಕ' ಹಾಗು ಅದರ 'ಮೇಲೆ ಏಳು' ಹಾಗು 'ಕೆಳಗಿನ ಆರು' ಲೋಕಗಳನ್ನು ಮೂರು ಲೋಕಗಳನ್ನಾಗಿ ಭೂಃ, ಭುವಃ, ಸ್ವಃ ಎಂದು ಕರೆಯುತ್ತಾರೆ. 'ಭೂಃ' ನಾವು ವಾಸವಾಗಿರುವ ಸ್ಥೂಲಲೋಕ. ಇತರ ಎರಡು ಲೋಕಗಳು ಸೂಕ್ಷ್ಮ ಲೋಕಗಳು. ಈ ಮೂರೂ ಲೋಕಗಳನ್ನು ಧರಿಸಿರುವ(ಹೊತ್ತಿರುವ) ಭಗವಂತ ತ್ರಿಲೋಕಧೃಕ್.

2 comments:

  1. ಬೆಂಗಳೂರಿನ ಶ್ರೀ ರಾಮಕೃಷ್ಣಾಶ್ರಮದವರು ಪ್ರಕಟಿಸಿದ ಪುಸ್ತಿಕೆಯಲ್ಲಿ ‘ತ್ರಿಲೋಕಧೃತ್’ ಎನ್ನುವ ಪಾಠವಿದೆ. ‘ಧೃಕ್’ ಹಾಗು ‘ಧೃತ್’ ಎರಡರಲ್ಲಿ ಯಾವುದು ಸರಿ?

    ReplyDelete
  2. ಇಲ್ಲಿ 'ಧೃಕ್' ಎಂದರೆ ಹೊತ್ತವನು ಅಥವಾ ಧರಿಸಿದವನು ಎಂದರ್ಥ. ಇದೇ ಅರ್ಥವನ್ನು ಮಹಾದ್ರಿಧೃಕ್ ಹಾಗು ವಿಶ್ವಧೃಕ್ ಎನ್ನುವಲ್ಲಿ ಕಾಣುತ್ತೇವೆ. ಆದರೆ 'ಧೃತ್' ಅರ್ಥ ನನಗೆ ತಿಳಿದಿಲ್ಲ.
    -ಧನ್ಯವಾದಗಳು

    ReplyDelete