Saturday, December 25, 2010

Vishnu sahasranama-Phala-Shruti

ಫಲಶ್ರುತಿಃ
ವಿಷ್ಣು ಸಹಸ್ರನಾಮ ಪಠಿಸುವುದರ ಮಹತ್ವ ಹಾಗು ಅದರ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ: 
ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ |
ನಾಮ್ನಾಂ ಸಹಸ್ರಂ ದಿವ್ಯಾನಾಮಶೇಷೇಣ ಪ್ರಕೀರ್ತಿತಮ್ || ||
ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರ -ನಿಯಮನಕ್ಕೆ ಕಾರಣನಾದ ಕೇಶವ ನಾಮಕ ಭಗವಂತನನ್ನು ಅವನ ಕೀರ್ತಿಯನ್ನು ಕೊಂಡಾಡುವ ಶ್ರೇಷ್ಠವಾದ ಸಹಸ್ರ ನಾಮ ವಿಷ್ಣು ಸಹಸ್ರನಾಮ. ಇದೊಂದು ಮಹಾಮಂತ್ರ. ಮಾನವನಿಂದ ಹಿಡಿದು ಚತುರ್ಮುಖನವರೆಗಿನ ಸಮಸ್ತ ಜೀವ ಜಾತಗಳಿಗೂ ಹಿರಿಯ ಶಕ್ತಿಯಾದ ಪರಮಾತ್ಮನ ಹೆಸರಿದು.
ನಾಮಗಳಲ್ಲಿ ಎರಡು ವಿಧ. ಒಂದು ಲೌಕಿಕ ನಾಮ, ಇನ್ನೊಂದು ದಿವ್ಯನಾಮ; ಉದಾಹರಣೆಗೆ ವಸುದೇವ ಮಗ ವಾಸುದೇವ ಎನ್ನುವುದು ಲೌಕಿಕ ನಾಮ.  
ಈ ಎಲ್ಲಾ ಭಗವಂತನ ನಾಮಗಳು ದಿವ್ಯ ನಾಮಗಳು; ಅನಾದಿನಿತ್ಯ, ಅಪ್ರಾಕೃತ(divine)ವಾದ ದಿವ್ಯ ನಾಮಗಳಿವು.ಇದು ಕೇವಲ ಸಾವಿರ ನಾಮವಷ್ಟೇ ಅಲ್ಲ, ಅನಂತನಾದ ಭಗವಂತನನ್ನು ಈ ಸಾವಿರ ನಾಮದಲ್ಲಿ ಚಿಂತನೆ ಮಾಡಬಹುದು. ಸಹಸ್ರ ಎಂದರೆ ಸಹ-ಸರಣ, ಭಗವಂತನ ಜೊತೆಗೆ/ಒಟ್ಟಿಗೆ ಆತನ ಅನಂತಗುಣಗಾನ ಈ ಸಹಸ್ರನಾಮ.      
ಯ ಇದಂ ಶೃಣುಯಾನ್ನಿತ್ಯಂ ಯಶ್ಚಾಪಿ ಪರಿಕೀರ್ತಯೇತ್ |
ನಾಶುಭಂ ಪ್ರಾಪ್ನುಯಾತ್ ಕಿಂಚಿತ್ ಸೋಮುತ್ರೇಹ ಚ ಮಾನವಃ || ||
ಯಾರು ಇದನ್ನು ಕೇಳುತ್ತಾರೋ, ಯಾರು ಇದನ್ನು ಭಕ್ತಿಯಿಂದ ತಿಳಿದು  ಪಠಿಸುತ್ತಾರೋ,ಅವರಿಗೆ ಎಂದೂ ಕೂಡಾ ಕೆಡುಕಾಗುವುದಿಲ್ಲ. ವಿಷ್ಣು ಸಹಸ್ರನಾಮವನ್ನು ಯಾರು ಬೇಕಾದರೂ ಪಠಿಸಬಹುದು. ಸಮಾಜದಲ್ಲಿ "ಹೆಂಗಸರು ವಿಷ್ಣು ಸಹಸ್ರನಾಮವನ್ನು ಪಠಿಸಬಾರದು" ಎನ್ನುವ ಮೂಢನಂಬಿಕೆ ಇದೆ. ಆದರೆ ಇಂತಹ ನಿರ್ಬಂಧವಿಲ್ಲ. ವಿಷ್ಣುಸಹಸ್ರನಾಮವನ್ನು ಯಾರು ಬೇಕಾದರೂ ಏಲ್ಲಿ ಬೇಕಾದರೂ ಪಠಿಸಬಹುದು. ಇದಕ್ಕೆ ಬೇಕಾಗಿರುವುದು ಕೇವಲ ಭಕ್ತಿಮಾತ್ರ. ಅದರಿಂದ ಎಂದೂ ಕೆಡುಕಾಗುವುದಿಲ್ಲ. ದೇವರ ನಾಮ ಇರುವುದೇ ನಮಗೆ. ನಮ್ಮ ಬದುಕಿನಲ್ಲಿ ಧೈರ್ಯ-ಆತ್ಮ ವಿಶ್ವಾಸ ತುಂಬಲು, ಭಯ ಪರಿಹರಿಸಲು. ಯಾರು ದೇವರನ್ನು ನಂಬುತ್ತಾನೋ ಅವನು ಎಂದೂ ಯಾವುದಕ್ಕೂ ಭಯಪಡಬೇಕಾಗಿಲ್ಲ. ಜಾತಿ-ಲಿಂಗ ಭೇದವಿಲ್ಲದೆ ಎಲ್ಲರೂ ಪಠಿಸಬಹುದಾದ ಸಹಸ್ರನಾಮ ವಿಷ್ಣುಸಹಸ್ರನಾಮ.              
ಯಾರು ಇದನ್ನು ಆಲಿಸುತ್ತಾರೆ ಮತ್ತು ಯಾರು ಇದನ್ನು  ಪಠಿಸುತ್ತಾರೆ ಆ ಮಾನವನು ಇಹ-ಪರದಲ್ಲಿ  ಕೆಡುಕನ್ನು ಹೊಂದಲಾರ. ನಾಮದ ಅರ್ಥವನ್ನು ತಿಳಿದು ಪಾರಾಯಣ ಮಾಡುವುದು ಮುಖ್ಯ.  
ವೇದಾಂತಗೋ ಬ್ರಾಹ್ಮಣಃ ಸ್ಯಾತ್ ಕ್ಷತ್ರಿಯೋ ವಿಜಯೀ ಭವೇತ್ |
ವೈಶ್ಯೋ ಧನಸಮೃದ್ಧಃ ಸ್ಯಾತ್ ಶೂದ್ರಸ್ಸುಖಮವಾಪ್ನುಯಾತ್ || ||  
ವಿಷ್ಣು ಸಹಸ್ರನಾಮವನ್ನು  ಎಲ್ಲಾ ವರ್ಣದವರೂ  ಪಠಿಸಬಹುದು. ಇಲ್ಲಿ ವರ್ಣ ಎಂದರೆ ಜಾತಿ ಅಲ್ಲ. ಹಿಂದೆ ಹೇಳಿದಂತೆ ಮಾನವನ ಸ್ವಭಾವಕ್ಕೆ ಅನುಗುಣವಾಗಿ ಪ್ರಾಚೀನರು ನಾಲ್ಕು ವರ್ಣವನ್ನು ಗುರುತಿಸಿದರು. ಜ್ಞಾನಾರ್ಜನೆ, ಅಧ್ಯಯನ ಮತ್ತು  ಚಿಂತನೆಯಲ್ಲಿ ಆಸಕ್ತಿ ಉಳ್ಳವ ಬ್ರಾಹ್ಮಣ(ಬೃಹತ್ ಆದುದ್ದನ್ನು ಅನ್ವೇಷಣೆ ಮಾಡುವವ-Intelligence); ಇನ್ನೊಬ್ಬರು ತೊಂದರೆಯಲ್ಲಿದ್ದಾಗ ರಕ್ಷಣೆ(Protection) ಮಾಡುವವ ಕ್ಷತ್ರಿಯ. ಆತನಲ್ಲಿ ಆಡಳಿತ(Administration) ಗುಣವಿರುತ್ತದೆ. ವೈಶ್ಯ ಹೊಟ್ಟೆಗೆ ಬೇಕಾದುದ್ದನ್ನು ಕೊಡುವ ವ್ಯಾಪಾರ ಮನೋವೃತ್ತಿ ಇರುವವರು(Production). ಆಹಾರ ಉತ್ಪತ್ತಿ, ಗೋವುಗಳನ್ನು ಸಾಕಿ ಹಾಲು ಮಾರುವುದು ಇತ್ಯಾದಿ. ಶೂದ್ರ ಅಂದರೆ ಇನ್ನೊಬ್ಬರ ಕಷ್ಟಕ್ಕೆ ಕರಗುವವ (Service). ಯಾರು  ಶೂದ್ರನಲ್ಲವೋ  ಅವನು ಮನುಷ್ಯನೇ ಅಲ್ಲ. ಈ ವರ್ಣ ಪದ್ಧತಿ ಪ್ರಪಂಚದ ಎಲ್ಲಾ ಭಾಗದಲ್ಲೂ ಇದೆ. ಬ್ರಾಹ್ಮಣನ ಮಗ ಕ್ಷತ್ರಿಯನಾಗಬಹುದು, ಇಲ್ಲಿ ಜೀವ ಸ್ವಭಾವ ಮುಖ್ಯ. ತಂದೆ-ತಾಯಿ ಜಾತಿ ಅಲ್ಲ! ಯಾರೂ ಏಕವರ್ಣದವನಲ್ಲ. ಎಲ್ಲರಲ್ಲೂ ಎಲ್ಲ ಸ್ವಭಾವವಿರುತ್ತದೆ. ಯಾವ ಸ್ವಭಾವ ನಮ್ಮಲ್ಲಿ ಹೆಚ್ಚಗಿದೆಯೋ ನಾವು ಆ ವರ್ಣಕ್ಕೆ ಸೇರುತ್ತೇವೆ.ಸ್ವಭಾವ ನೈಸರ್ಗಿಕ.
ವಿಷ್ಣು ಸಹಸ್ರನಾಮ ಕೇಳುವುದರಿಂದ, ಪಠಿಸುವುದರಿಂದ ಬ್ರಾಹ್ಮಣನ ಜ್ಞಾನ ವೃದ್ಧಿಯಾಗುತ್ತದೆ, ವೈಶ್ಯನ ವ್ಯಾಪಾರ ಹೆಚ್ಚುತ್ತದೆ, ಕ್ಷತ್ರಿಯನ ಶತ್ರು ನಿಗ್ರಹಕ್ಕೆ ಬೇಕಾದ ಬಲವೃದ್ಧಿಯಾಗುತ್ತದೆ. ಶೂದ್ರ ಸುಖವಾಗಿ ಬದುಕುತ್ತಾನೆ.
ಹೀಗೆ ದೇವರ ನಾಮ ಪಠಿಸಲು ಯಾವ ವರ್ಣ ಭೇದವಿಲ್ಲ.               
ಬ್ರಾಹ್ಮಣನು ವೇದಗಳ ನಿರ್ಣಯವನ್ನು ಬಲ್ಲವನಾದಾನು; ಕ್ಷತ್ರಿಯನು ಗೆಲುವನ್ನು ಪಡೆದಾನು; ವೈಶ್ಯನು ತುಂಬು ಸಿರಿವಂತನಾದಾನು; ಶೂದ್ರನು ಸುಖವನ್ನು ಪಡೆದಾನು.  
ಧರ್ಮಾರ್ಥೀ ಪ್ರಾಪ್ನುಯಾದ್ಧರ್ಮಂ ಅರ್ಥಾರ್ಥೀ ಚಾರ್ಥಮಾಪ್ನುಯಾತ್ |
ಕಾಮಾನವಾಪ್ನುಯಾತ್ ಕಾಮೀ ಪ್ರಜಾರ್ಥೀ ಚಾಪ್ನುಯಾತ್ ಪ್ರಜಾಮ್ || ||
ಮನುಷ್ಯ ಪಡೆಯಲಿಕ್ಕೆ ಬಯಸುವುದು ಧರ್ಮ, ಅರ್ಥ, ಕಾಮ, ಮೋಕ್ಷ  ಈ ನಾಲ್ಕನ್ನು. ಇದರಲ್ಲಿ ಕಾಮ ಮತ್ತು ಅರ್ಥ ಲೌಕಿಕವಾದದ್ದು. ಸಾಮಾನ್ಯವಾಗಿ ಧಾರ್ಮಿಕ ಪ್ರವೃತ್ತಿಯುಳ್ಳ(Elevated Souls)ವರು ಲೌಕಿಕವಾದದ್ದನ್ನು  ಬಯಸದೇ ದೇವರನ್ನು ತಿಳಿಯುವ ಧರ್ಮ ಹಾಗು ಅದರಾಚೆಗಿನ ಮೋಕ್ಷವನ್ನು ಸುಖವೆಂದು ತಿಳಿದಿರುತ್ತಾರೆ. ಬಯಕೆಗಳೇ ಇಲ್ಲದಿರುವುದು ನಿಜವಾದ ಸುಖ.
ವಿಷ್ಣು ಸಹಸ್ರನಾಮ ಪಠಿಸುವುದು ಅಂದರೆ ಪ್ರತಿ ನಾಮದ ಉಚ್ಛಾರ ಹಾಗು ಅದರ ಹಿಂದಿನ ಅರ್ಥ ಸ್ಮರಣೆ.ಒಂದು ನಾಮ ಸ್ಮರಣೆ ಮಾಡಿದರೂ ಸಾಕು ನಮ್ಮ ಬದುಕು ಪಾವನವಾಗುತ್ತದೆ, ಧರ್ಮಮಯವಾಗುತ್ತದೆ . ಒಂದು ವೇಳೆ ನಮಗೆ ಅತೀ ಕಷ್ಟವಿದ್ದು ದುಡ್ಡಿನ ಅಗತ್ಯ ಇದ್ದಲ್ಲಿ ವಿಷ್ಣು ಸಹಸ್ರನಾಮವನ್ನು ಯಾವುದೇ ಲೋಭವಿಲ್ಲದೆ ನಿರ್ಮಲ ಮನಸ್ಸಿನಿಂದ ಭಕ್ತಿ ಪೂರ್ವಕವಾಗಿ ಚಿಂತನೆ ಮಾಡಿದರೆ ಖಂಡಿತ ನಾವು ಆ ಚಿಂತೆಯಿಂದ ಪಾರಾಗುತ್ತೇವೆ. ಆದರೂ ನಾವು ಏನನ್ನೂ ಬಯಸದೇ ದೇವರ ಸ್ಮರಣೆ ಮಾಡುವುದು ಅತೀ ಶ್ರೇಷ್ಠ. ಬಯಕೆಗಳಿಲ್ಲದೆ   ಸ್ಮರಿಸಿದರೆ ನಾವು ಮಹಾಫಲವನ್ನು ಪಡೆಯುತ್ತೇವೆ; ಅರಿವನ್ನು ಪಡೆದು ಮೋಕ್ಷವನ್ನು ಪಡೆಯುತ್ತೇವೆ.
ಧರ್ಮ ಬೇಕೆನ್ನುವವನು ಪಡೆದಾನು ಧರ್ಮವನ್ನು;ಅರ್ಥ ಬೇಕೆನ್ನುವವನು ಪಡೆದಾನು ಅರ್ಥವನ್ನು. ಕಾಮಗಳನ್ನು ಪಡೆದಾನು-ಕಾಮ ಬೇಕೆನುವವನು. ಪ್ರಜ್ಞೆ ಬೇಕೆನುವವನು ಪಡೆದಾನು ಪ್ರಜ್ಞೆಯನ್ನು. 
ಭಕ್ತಿಮಾನ್ ಯಃ ಸದೋತ್ಥಾಯ ಶುಚಿಸ್ತದ್ಗತಮಾನಸಃ |
ಸಹಸ್ರಂ ವಾಸುದೇವಸ್ಯ ನಾಮ್ನಾಮೇತತ್ ಪ್ರಕೀರ್ತಯೇತ್ || ||
ವಿಷ್ಣು ಸಹಸ್ರನಾಮ ಯಾವಾಗ ಪಠಿಸಬೇಕು ಎನ್ನುವ ಪ್ರಶ್ನೆಯನ್ನು ಎಲ್ಲರೂ ಕೇಳುತ್ತಾರೆ. ಈ ಪ್ರಶ್ನೆಗೆ ಇಲ್ಲಿ ಉತ್ತರವಿದೆ.  ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಬೇಕಾಗಿರುವುದು ಸಮಯ-ಗಳಿಗೆ ಅಲ್ಲ, ಬೇಕಾಗಿರುವುದು ಒಂದೇ ಒಂದು-ಅದು ಭಕ್ತಿ. ಬೆಳಿಗ್ಗೆ ಎದ್ದ ತಕ್ಷಣ ನಿರ್ಮಲವಾದ ಮನಸ್ಸಿನಿಂದ ಭಕ್ತಿಪೂರ್ವಕವಾಗಿ ಪಠಿಸಬಹುದು. ಇಲ್ಲಿ ಮನಶುದ್ಧಿ ಮುಖ್ಯ, ಅದೇ ಮಡಿ.  
ಭಕ್ತಿಯಿಂದ ಯಾರು ದಿನವು ಬೆಳಗೆದ್ದು ನಿರ್ಮಲನಾಗಿ ಭಗವಂತನಲ್ಲಿ ಸಂಪೂರ್ಣ ಮನಸ್ಸಿಟ್ಟು  ವಾಸುದೇವನ ಈ ಸಾವಿರ ಹೆಸರನ್ನು ಹೇಳುತ್ತಾನೆ ಅವನು ಯಶವನ್ನು ಕೀರ್ತಿಯನ್ನು ಗಳಿಸುತ್ತಾನೆ ಎನ್ನುವುದನ್ನು ಮುಂದಿನ ಶ್ಲೋಕ ಹೇಳುತ್ತದೆ. 
ಯಶಃ ಪ್ರಾಪ್ನೋತಿ ವಿಪುಲಂ ಯಾತಿ ಪ್ರಾಧಾನ್ಯಮೇವ ಚ |
ಅಚಲಾಂ ಶ್ರಿಯಮಾಪ್ನೋತಿ ಶ್ರೇಯಃ ಪ್ರಾಪ್ನೋತ್ಯನುತ್ತಮಮ್ || ||
ಈ ಸಹಸ್ರ ನಾಮ ಜಪದಿಂದ ಕೀರ್ತಿ ಬರುತ್ತದೆ. ಇಲ್ಲಿ ಕೀರ್ತಿ ಎಂದರೆ ಭಗವಂತನ ಅರಿವು. ಇದರಿಂದ ಸಮುದಾಯದಲ್ಲಿ ಹಿರಿಯನಾಗಿ ಎಲ್ಲರೂ ಗೌರವದಿಂದ ಕಾಣುವಂತಾಗುತ್ತದೆ. ಎಂದೂ ಕರಗದ ಜ್ಞಾನ ಸಂಪತ್ತನ್ನು ಪಡೆದು ಶ್ರೇಯಸ್ಸನ್ನು ಪಡೆಯುತ್ತೇವೆ.   
ಹಬ್ಬಿದ ಜಸವನ್ನು ಗಳಿಸುತ್ತಾನೆ; ಬಂಧುಗಳಲ್ಲಿ ಮುಂದಾಳುತನ ಪಡೆಯುತ್ತಾನೆ; ಅಳಿಯದ ಸಿರಿಯನ್ನು ಪಡೆಯುತ್ತಾನೆ; ಮುಗಿಲಿಲ್ಲದ ಶ್ರೇಯಸ್ಸನ್ನು (ಮುಕ್ತಿಯನ್ನು) ಪಡೆಯುತ್ತಾನೆ.
ನ ಭಯಂ ಕ್ವಚಿದಾಪ್ನೋತಿ ವೀರ್ಯಂ ತೇಜಶ್ಚ ವಿಂದತಿ |
ಭವತ್ಯರೋಗೋ ದ್ಯುತಿಮಾನ್ ಬಲರೂಪಗುಣಾನ್ವಿತಃ || ||
ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ನನ್ನನ್ನು ನಿರಂತರವಾಗಿ ಕಾಯುವ ಪರಶಕ್ತಿಯೊಂದಿದೆ ಎನ್ನುವ ಆತ್ಮವಿಶ್ವಾಸ ಮೂಡುತ್ತದೆ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು,ಮನೋಬಲ, ದೇಹಬಲ ಇಂದ್ರಿಯಬಲ ಬರುತ್ತದೆ.    
ಎಂದೂ ಯಾವುದಕ್ಕೂ ಹೆದರುವುದಿಲ್ಲ; ಬೀರವನ್ನು ಗಳಿಸುತ್ತಾನೆ; ತೇಜಸ್ವಿಯಾಗುತ್ತಾನೆ; ಆರೋಗ್ಯವಂತನಾಗಿ ಕಾಂತಿಯನ್ನು ಪಡೆಯುತ್ತಾನೆ.  ಬಲ-ರೂಪ-ಗುಣಗಳಿಂದ ಕೂಡಿದವನಾಗುತ್ತಾನೆ.  
ರೋಗಾರ್ತೋ ಮುಚ್ಯತೇ ರೋಗಾದ್ಬದ್ಧೋ ಮುಚ್ಯೇತ ಬಂಧನಾತ್ |
ಭಯಾನ್ಮುಚ್ಯೇತ ಭೀತಸ್ತು ಮುಚ್ಯೇತಾಪನ್ನ ಆಪದಃ || ||
ರೋಗ ಪೀಡಿತನು ರೋಗದಿಂದ ಪಾರಾದಾನು; ಸೆರೆಯಲ್ಲಿರುವವನು ಪಡೆದಾನು ಬಿಡುಗಡೆ ಸೆರೆಯಿಂದ; ಭಯದಿಂದ ಪಾರಾದಾನು ಹೆದರಿಕೊಂವನು; ಪಾರಾದಾನು ತೊಂದರೆಗೊಳಗಾದವನು ತೊಂದರೆಯಿಂದ.    
ದುರ್ಗಾಣ್ಯತಿತರತ್ಯಾಶು ಪುರುಷಃ ಪುರುಷೋತ್ತಮಮ್ |
ಸ್ತುವನ್ನಾಮಸಹಸ್ರೇಣ ನಿತ್ಯಂ ಭಕ್ತಿಸಮನ್ವಿತಃ || ||
ಸಾಧಕನಾದ ಜೀವಿ ಪುರುಷೋತ್ತಮನನ್ನು ಸ್ತುತಿಸುತ್ತ ಸಾವಿರ ಹೆಸರಿನಿಂದ, ಅನುದಿನ, ಭಕ್ತಿಯಿಂದ ಕೂಡಿದವನಾಗಿ, ಬಲು ಬೇಗನೆ ದುಗುಡವನ್ನು ದಾಟುತ್ತಾನೆ . 
ವಾಸುದೇವಾಶ್ರಯೋ ಮರ್ತ್ಯೋ ವಾಸುದೇವಪರಾಯಣಃ |
ಸರ್ವಪಾಪವಿಶುದ್ಧಾತ್ಮಾ ಯಾತಿ ಬ್ರಹ್ಮ ಸನಾತನಮ್ || ೧೦ ||
ವಾಸುದೇವನನ್ನು ಆಶ್ರಯಿಸಿದ ಮಾನವನು, ವಾಸುದೇವನೆ ಕೊನೆಯಾಸರೆ ಎಂದು ನಂಬಿದವನು,ಎಲ್ಲಾ ಪಾಪಗಳನ್ನು ತೊಡೆದು ಪರಿಶುದ್ಧ ಸ್ವರೂಪನಾಗಿ ಎಂದೆಂದೂ ಇರುವ ಪರತತ್ವವನ್ನು ಸೇರುತ್ತಾನೆ . 
ನ ವಾಸುದೇವಭಕ್ತಾನಾಮಶುಭಂ ವಿದ್ಯತೇ ಕ್ವಚಿತ್ |
ಜನ್ಮಮೃತ್ಯುಜರಾವ್ಯಾಧಿಭಯಂ ನೈವೋಪಜಾಯತೇ || ೧೧ ||
ವಾಸುದೇವನ ಭಕ್ತರಿಗೆ ಎಲ್ಲೂ ಕೇಡು ಎನ್ನುವುದು ಇರುವುದಿಲ್ಲ . ಹುಟ್ಟು-ಸಾವು-ಮುಪ್ಪು-ರುಜಿನ ಭಯ ಉಂಟಾಗುವುದೇ ಇಲ್ಲ.  
ಇಮಂ ಸ್ತವಮಧೀಯಾನಃ ಶ್ರದ್ಧಾಭಕ್ತಿಸಮನ್ವಿತಃ |
ಯುಜ್ಯೇತಾತ್ಮಾಸುಖಕ್ಷಾಂತಿಶ್ರೀಧೃತಿಸ್ಮೃತಿಕೀರ್ತಿಭಿಃ || ೧೨ ||
ಶ್ರದ್ಧೆ-ಭಕ್ತಿಗಳಿಂದೊಡಗೂಡಿ ಈ ಸ್ತೋತ್ರವನ್ನು ಅರಿತರೆ ; ಸುಖ, ಕ್ಷಮೆ, ಸಂಪತ್ತು, ಧೈರ್ಯ, ನೆನಪು ಮತ್ತು ಕೀರ್ತಿಗಳು ಲಭಿಸುತ್ತವೆ.      
ನ ಕ್ರೋಧೋ ನ ಚ ಮಾತ್ಸರ್ಯಂ ನ ಲೋಭೋ ನಾಶುಭಾ ಮತಿಃ |
ಭವಂತಿ ಕೃತಪುಣ್ಯಾನಾಂ ಭಕ್ತಾನಾಂ ಪುರುಷೋತ್ತಮೇ || ೧೩ ||
ಪುಣ್ಯವಂತರಿಗೆ, ಪುರುಷೋತ್ತಮನಲ್ಲಿ ಬಗೆಯನಿಟ್ಟವರಿಗೆ ಸಿಟ್ಟು ಬರದು, ಹೊಟ್ಟೆಕಿಚ್ಚೂ ಇರದು; ಆಸೆಬುರುಕತನ ಕಾಡದು; ಕೆಟ್ಟ ಬುದ್ಧಿ ಮೂಡದು . ಆದರೆ ಎಲ್ಲವುದಕ್ಕೂ ಭಕ್ತಿ ಮುಖ್ಯ.     
ದ್ಯೌಸ್ಸಚಂದ್ರಾರ್ಕನಕ್ಷತ್ರಾ ಖಂ ದಿಶೋ ಭೂರ್ಮಹೋದಧಿಃ |
ವಾಸುದೇವಸ್ಯ ವೀರ್ಯೇಣ ವಿಧೃತಾನಿ ಮಹಾತ್ಮನಃ || ೧೪ ||
ಸ್ವರ್ಗ, ಚಂದ್ರ-ಸೂರ್ಯ-ನಕ್ಷತ್ರಗಳೊಡನೆ, ಆಕಾಶ, ದಿಕ್ಕುಗಳು, ನೆಲ, ಕಡಲು ಎಲ್ಲ ಮಹಾತ್ಮನಾದ ವಾಸುದೇವನ ಸಾಮರ್ಥ್ಯದಿಂದ ಧರಿಸಲ್ಪಟ್ಟಿವೆ.  
ಸಸುರಾಸುರಗಂಧರ್ವಂ ಸಯಕ್ಷೋರಗರಾಕ್ಷಸಮ್ |
ಜಗದ್ವಶೇ ವರ್ತತೇದಂ ಕೃಷ್ಣಸ್ಯ ಸಚರಾಚರಮ್ || ೧೫ ||
ದೇವ -ದಾನವ-ಗಂಧರ್ವರೊಡನೆ, ಯಕ್ಷರು, ಹಾವುಗಳು, ರಕ್ಕಸರೊಡನೆ, ಚರ-ಆಚರಗಳೊಡನೆ ಈ ಎಲ್ಲ ಜಗತ್ತು ಆತನ ಅಂಕೆಯಲ್ಲಿದೆ.  
ಇಂದ್ರಿಯಾಣಿ ಮನೋ ಬುದ್ಧಿಃ ಸತ್ತ್ವಂ ತೇಜೋ ಬಲಂ ಧೃತಿಃ |
ವಾಸುದೇವಾತ್ಮಕಾನ್ಯಾಹುಃ, ಕ್ಷೇತ್ರಂ ಕ್ಷೇತ್ರಜ್ಞ ಏವ ಚ || ೧೬ ||
ಇಂದ್ರಿಯಗಳು,ಮನಸ್ಸು,ಬುದ್ಧಿ, ಸ್ವಭಾವ, ತೇಜಸ್ಸು, ಬಲ,ಧೈರ್ಯ,ಎಲ್ಲ ವಾಸುದೇವನ ಅಧೀನದಲ್ಲಿವೆ ; ಈ ಶರೀರ ಮತ್ತು ಇಲ್ಲಿರುವ ಜೀವ ಕೂಡ. ಇದನ್ನೆಲ್ಲ ಬಲ್ಲ ಅವನೆ ನಿಜವಾದ ಕ್ಷೇತ್ರಜ್ಞ ಕೂಡ.     
ಸರ್ವಾಗಮಾನಾಮಾಚಾರಃ ಪ್ರಥಮಂ ಪರಿಕಲ್ಯ್ಪತೇ |
ಆಚಾರಪ್ರಭವೋ ಧರ್ಮೋ ಧರ್ಮಸ್ಯ ಪ್ರಭುರಚ್ಯುತಃ || ೧೭ ||
ಎಲ್ಲ ಶಾಸ್ತ್ರಗಳ ಮೂಲಕ ಒಳ್ಳೆಯ ನಡೆಯ ಕಲ್ಪನೆ ಮೊದಲು ಮೂಡುತ್ತದೆ. ಒಳ್ಳೆಯ ನಡೆಯಿಂದ ಸಿಗುವುದು ಧರ್ಮ. ಧರ್ಮದ ಒಡೆಯನೆ ಕುಂದಿರದ ನಾರಾಯಣ. 
ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ || ೧೮ ||
ಋಷಿಗಳು, ಪಿತೃಗಳು ದೇವತೆಗಳು,ಮಣ್ಣು-ನೀರು-ಬೆಂಕಿ-ಗಾಳಿ-ಆಕಾಶ ಎಂಬ ಐದು ಮಹಾ ಭೂತಗಳು, ತ್ವಕ್,ಚರ್ಮ ಮಾಂಸ ರುದಿರ ಮಜ್ಜಾ ಮೇದಸ್ಸು ಅಸ್ಥಿಗಳೆಂಬ ಏಳು ಧಾತುಗಳು, ಚಲಿಸುವ ಚಲಿಸದ ಈ ಎಲ್ಲ ವಿಶ್ವವೂ ನಾರಾಯಣನಿಂದ ಹುಟ್ಟಿ ಬಂದದ್ದು.      
ಯೋಗೋ ಜ್ಞಾನಂ ತಥಾ ಸಾಂಖ್ಯಂ ವಿದ್ಯಾಃ ಶಿಲ್ಪಾದಿಕರ್ಮ ಚ |
ವೇದಾಶ್ಶಾಸ್ತ್ರಾಣಿ ವಿಜ್ಞಾನಮೇತತ್ಸರ್ವಂ ಜನಾರ್ದನಾತ್ || ೧೯ ||
ಯೋಗ, ಜ್ಞಾನ ಮಾರ್ಗ , ಅಂತೆ ಆತ್ಮದ ಅರಿವು, ಲಲಿತ ವಿದ್ಯೆಗಳು, ಶಿಲ್ಪಿ ಮುಂತಾದ ಕುಸುರು ಕೆಲಸ, ವೇದಗಳು, ಶಾಸ್ತ್ರಗಳು, ವಿಜ್ಞಾನ, ಇದೆಲ್ಲವೂ ಜನಾರ್ದನನಿಂದ.    
ಏಕೋ ವಿಷ್ಣುರ್ಮಹದ್ಭೂತಂ ಪೃಥಗ್ಭೂತಾನ್ಯನೇಕಶಃ |
ತ್ರೀನ್‌ಲೋಕಾನ್ವ್ಯಾಪ್ಯ ಭೂತಾತ್ಮಾ ಭುಂಕ್ತೇ ವಿಶ್ವಭುಗವ್ಯಯಃ || ೨೦ ||
ಒಬ್ಬನೇ ಒಬ್ಬ ವಿಷ್ಣು ಹಿರಿಯ ಚೇತನ; ಅಲ್ಪ ಚೇತನಗಳು ಹಲವಾರು. ಮೂರು ಲೋಕಗಳನ್ನು ತುಂಬಿದ, ಎಲ್ಲ ಜೀವರ ಅಂತರ್ಯಾಮಿ, ಅಳಿವಿರದ ನಾರಾಯಣ ಎಲ್ಲ ವಿಶ್ವವನ್ನು ಪಾಲಿಸುತ್ತಾನೆ. ಕೊನೆಗೆ ಕಬಳಿಸುತ್ತಾನೆ.   
ಇಮಂ ಸ್ತವಂ ಭಗವತೋ ವಿಷ್ಣೋರ್ವ್ಯಾಸೇನ ಕೀರ್ತಿತಮ್ |
ಪಠೇದ್ಯ ಇಚ್ಛೇತ್ಪುರುಷಃ ಶ್ರೇಯಃ ಪ್ರಾಪ್ತುಂ ಸುಖಾನಿ ಚ || ೨೧ ||
ಭಗವಾನ್ ವಿಷ್ಣುವಿನ ಈ ಸ್ತೋತ್ರವನ್ನು, ಸ್ವತಃ ವ್ಯಾಸರೆ ನುಡಿದಿರುವುದು . ನಿಜವಾದ ಶ್ರೇಯಸ್ಸನ್ನು ಸುಖವನ್ನು ಸಾಧಕನು ಇದರಿಂದ ಪಡೆಯತ್ತಾನೆ.   
ವಿಶ್ವೇಶ್ವರಮಜಂ ದೇವಂ ಜಗತಃ ಪ್ರಭವಾಪ್ಯಯಮ್ |
ಭಜಂತಿ ಯೇ ಪುಷ್ಕರಾಕ್ಷಂ ನ ತೇ ಯಾಂತಿ ಪರಾಭವಮ್ || ೨೨ ||
ಜಗದೊಡೆಯನನ್ನು, ಹುಟ್ಟಿರದ ದೇವನನ್ನು, ಜಗದ ಹುಟ್ಟು-ಸಾವುಗಳಿಗೆ ಕಾರಣನಾದ ತಾವರೆಗಣ್ಣಿನ ನಾರಾಯಣನನ್ನು ಯಾರು ಭಜಿಸುತ್ತಾರೆ ಅವರು ಎಂದೆಂದೂ ಸೋಲನ್ನು ಕಾಣುವುದಿಲ್ಲ. 
ಇತಿ ಶ್ರೀಮನ್ಮಹಾಭಾರತೇ  ಅನುಶಾಸನಪರ್ವಣಿ ಶ್ರೀವಿಷ್ಣುಸಹಸ್ರನಾಮ ಸ್ತೋತ್ರಂ ಸಂಪೂರ್ಣಮ್.
ಹೀಗೆ ಮಹಾಭಾರತದ ಅನುಶಾಸನ ಪರ್ವದಲ್ಲಿ ದೇವರ ಸಾವಿರ ಹೆಸರಿನ ಹಾಡು ಮುಗಿಯಿತು.
 
||ಸರ್ವೇ ಜನಾಃ ಸುಖಿನೋ ಭವಂತು||
|| ಶ್ರೀ ಕೃಷ್ಣಾರ್ಪಣ ಮಸ್ತು||

5 comments:

  1. ವಿಷ್ಣುಪ್ರಿಯರೆ,
    ಎಷ್ಟು ಬೇಗನೇ ವಿಷ್ಣುಸಹಸ್ರನಾಮವು ಮುಕ್ತಾಯಗೊಂಡಿತಲ್ಲ! ಅರ್ಥವಿವರಣೆಯನ್ನು ನೀಡಿದ ನಿಮಗೆ ಅನೇಕ ಧನ್ಯವಾದಗಳು.

    ReplyDelete
  2. Thank you.
    Coming up Next:
    Bhagavad Gita-
    http://bhagavadgitakannada.blogspot.com/

    ReplyDelete
  3. sir, vishnusahasranamada sarala vivarane gaagi dhanyavadagalu.

    ReplyDelete
  4. sir,vishnusahasranaamada saralaanuvaadakkaagi dhanyavadagalu.

    ReplyDelete
  5. Pranamam,
    Excellent article about the Vishnu Sahasranama Phala Shruti.
    Here is the full information about the Vishnu Sahasranamam.
    Thanks.

    ReplyDelete