Thursday, December 23, 2010

Vishnu sahasranama 985-992

ವಿಷ್ಣು ಸಹಸ್ರನಾಮ:
ಆತ್ಮಯೋನಿಃ ಸ್ವಯಂಜಾತೋ ವೈಖಾನಃ ಸಾಮಗಾಯನಃ
ದೇವಕೀನಂದನಃ ಸ್ರಷ್ಟಾ ಕ್ಷಿತೀಶಃ ಪಾಪನಾಶನಃ
985) ಆತ್ಮಯೋನಿಃ
ಆತ್ಮ ಎನ್ನುವುದಕ್ಕೆ ಅನೇಕ ಅರ್ಥಗಳಿವೆ, 'ಆತ್ಮನಸ್ತು  ಕಾಮಾಯ ಸರ್ವಮ್ ಪ್ರಿಯಮ್ ಭವತಿ' ಎಂದಿದ್ದಾರೆ. ಇಷ್ಟೇ ಅಲ್ಲದೆ ಯಾಜ್ಞವಲ್ಕ್ಯ ಹೇಳುವಂತೆ: "ಆತ್ಮಾವಾರೆ ದ್ರುಷ್ಟವ್ಯೋ, ಶ್ರೋತವ್ಯೋ ,ಮಂತವ್ಯೋ, ನಿದಿಧ್ಯಾಸಿತವ್ಯಃ". ಆತ್ಮ ಶಬ್ದ ಮೇಲ್ನೋಟಕ್ಕೆ ಶರೀರ,ಇನ್ನೂ ಆಳವಾಗಿ ಚಿಂತಿಸಿದರೆ ಮನಸ್ಸು, ಜೀವ, ಜೀವಾಭಿಮಾನಿ ದೇವತೆ ಚತುರ್ಮುಖ, ಗರುಡ-ಶೇಷರು, ಕೊನೆಗೆ ಪರಮಾತ್ಮ. ಪ್ರತಿಯೊಂದು ಜೀವಕ್ಕೆ ದೇಹವೆಂಬ ಮನೆಯನ್ನು ಕೊಟ್ಟು, ಅದರ ಮಧ್ಯದಲ್ಲಿ ಅನಾಹತ ಚಕ್ರವೆಂಬ ಶಕ್ತಿ ಕೇಂದ್ರ ನಿರ್ಮಿಸಿ, ಜೀವನನ್ನು  ಅಲ್ಲಿ ಕುಳ್ಳಿರಿಸಿ, ಪ್ರಾಣದೇವರ ಸಮೇತನಾಗಿ ಹೃತ್ಕಮಲ ಮಧ್ಯ ನೆಲೆಸಿ ನಮ್ಮನ್ನು ನಡೆಸುವ ಭಗವಂತ ಆತ್ಮಯೋನಿಃ.
986) ಸ್ವಯಂಜಾತಃ 
ತಾನೇ ತಾನಾಗಿ ಆವಿರ್ಭೂತನಾಗುವ ಭಗವಂತ ಸ್ವಯಂಜಾತಃ. ಆತನಿಗೆ ಆತನೇ ತಂದೆ-ತಾಯಿ. ಆದರೆ ಭಕ್ತವತ್ಸಲನಾದ ಭಗವಂತನಿಗೆ ಹೆಸರಿಡುವ ತಂದೆ ಮಾತ್ರ ಜ್ಞಾನಿಗಳು ಅಥವಾ ಆತನ ಭಕ್ತರು! 
987) ವೈಖಾನಃ
ಈ ಸಂಸಾರ ಬಂಧದಿಂದ ಬಿಡುಗಡೆಹೊಂದಿದ ವಿಖನಸರಿಗೂ ಕೂಡಾ ಆರಾಧ್ಯನಾದ ಮುಕ್ತಿ ನಿಯಾಮಕ ಭಗವಂತ ವೈಖಾನಃ.
988) ಸಾಮಗಾಯನಃ
ಸೃಷ್ಟಿಯ ಆದಿಯಲ್ಲಿ ಎಲ್ಲಾ ವೇದವನ್ನು ಚತುರ್ಮುಖನಿಗೆ ಹೇಳಿದ ಭಗವಂತನಿಗೆ ಸಾಮವೇದವೆಂದರೆ ಬಹಳ ಪ್ರೀತಿ. ಕೃಷ್ಣಾವತಾರದಲ್ಲಿ ತನ್ನ ಕೊಳಲಿನಿಂದ ಸಮಗಾನವನ್ನು ನುಡಿಸಿದ ಭಗವಂತ, ಸಾಮಗಃ (ಸಾಮಗಾನವನ್ನು ಹಾಡುವವ)ರಿಗೆ ಅಯನ(ಆಸರೆ).    
989) ದೇವಕೀನಂದನಃ
ಕೊಳಲಿನ ನಾದದಿಂದ ಸಾಮವನ್ನು ಹಾಡುವ ಕೃಷ್ಣ ದೇವಕೀನಂದನನಾಗಿ ಅವತರಿಸಿ ಬಂದ ಸೌಂದರ್ಯ ಮೂರ್ತಿ ಎನ್ನುವುದು ಈ ನಾಮದ ಮೇಲ್ನೋಟದ ಅರ್ಥ. ಇಲ್ಲಿ 'ದೇವ' ಎಂದರೆ ದೇವತೆಗಳು, 'ಕಂ' ಎಂದರೆ ಆನಂದ. ದೇವತೆಗಳಿಗೆ ಆನಂದವನ್ನು ಕೊಡುವ ವೇದವಾಗ್ಮಯ(ದೇವಕೀ)ವನ್ನು ಕೇಳಿ ಕುಣಿದಾಡುವ ಭಗವಂತ, ವೈದಿಕ ಸಾಹಿತ್ಯವೆಂಬ ಗರುಡನನ್ನೇರಿ ನಮ್ಮ ಬಳಿಗೆ ಬರುವ ದೇವಕೀನಂದನಃ.
990) ಸ್ರಷ್ಟಾ
ಎಲ್ಲವನ್ನು ಸೃಷ್ಟಿಮಾಡಿದ ಭಗವಂತ ಸ್ರಷ್ಟಾ.
991) ಕ್ಷಿತೀಶಃ
ಕ್ಷಿತಿ ಎಂದರೆ ಭೂಮಿ, ಅಥವಾ ಸಮಸ್ತ ಬ್ರಹ್ಮಾಂಡ. ಇಂತಹ ಬ್ರಹ್ಮಾಂಡದ ಒಡೆಯ ಭಗವಂತ ಕ್ಷಿತೀಶಃ. ಪ್ರತಿಯೊಂದು ವಸ್ತುವಿನ ಅಳಿವು-ಉಳಿವು ಆತನ ಅಧೀನ. ಪ್ರತಿಯೊಂದು ಕ್ರಿಯೆಯನ್ನು ಮಾಡಿಸುವ ಪ್ರೇರಕ ಭಗವಂತ ಕ್ಷಿತೀಶಃ.   
992) ಪಾಪನಾಶನಃ
ನಮಗೆ ಪಾಪದ ಲೇಪ ಅಂಟುವುದು  'ನಾನು' ಎನ್ನುವ ಅಹಂಕಾರವಿದ್ದಾಗ ಮಾತ್ರ. ನಾನು ಏನೂ ಅಲ್ಲ, ನನ್ನೊಳಗಿರುವ ಭಗವಂತ ಸರ್ವ ನಿಯಾಮಕ ಎಂದು ಅರಿತಾಗ, ಭಗವಂತ ಸರ್ವ ಪಾಪಗಳನ್ನು ನಾಶ ಮಾಡುತ್ತಾನೆ. ಅಥವಾ ನಮಗೆ ಪಾಪದ ಲೇಪವಿಲ್ಲದಂತೆ ಮಾಡುತ್ತಾನೆ. ಇದೇ ಮಾತನ್ನು ಶ್ರೀಕೃಷ್ಣ ಪಾಪಪ್ರಜ್ಞೆಯಲ್ಲಿ ನಿಂತ ಅರ್ಜುನನಿಗೆ ಯುದ್ಧರಂಗದಲ್ಲಿ ಉಪದೇಶಿಸುತ್ತಾನೆ. ಆ ಕಾರಣಕ್ಕಾಗಿ ಅರ್ಜುನ ಮಾಡಿದ ಯುದ್ಧ ಧರ್ಮವಾಯಿತು, ಅಹಂಕಾರದಿಂದ ಯುದ್ಧ ಮಾಡಿದ ದುರ್ಯೋದನನಿಗೆ ಯುದ್ಧದ ಸರ್ವ ಪಾಪವು ಅಂಟಿತು. ಹೀಗೆ ಅಹಂಕಾರವಿಲ್ಲದೆ ಭಗವಂತನಲ್ಲಿ ಶರಣಾದ ಭಕ್ತರ ಪಾಪವನ್ನು ಕಳೆದು, ಪಾಪಿಗಳ ಸಂಹಾರ ಮಾಡುವ ಭಗವಂತ ಪಾಪನಾಶನಃ.

No comments:

Post a Comment