Tuesday, December 21, 2010

Vishnu Sahasranama 933-941

ವಿಷ್ಣು ಸಹಸ್ರನಾಮ:
ಅನಂತರೂಪೋನಂತಶ್ರೀರ್ಜಿತಮನ್ಯುರ್ಭಯಾಪಹಃ
ಚತುರಶ್ರೋ ಗಭೀರಾತ್ಮಾ ವಿದಿಶೋ ವ್ಯಾದಿಶೋ ದಿಶಃ
933) ಅನಂತರೂಪಃ
ಭಗವಂತ  ಒಬ್ಬನೆ, ಆದರೆ ಆತನ ರೂಪ ಹಲವು.ಅನೇಕ ರೂಪದಲ್ಲಿ ಜಗತ್ತಿನಾದ್ಯಂತ ತುಂಬಿರುವ ಭಗವಂತ ಅನಂತರೂಪಃ. ನಮ್ಮ ದೇಹದಲ್ಲಿ ಕೂಡಾ ಆತ ಅನೇಕ ರೂಪದಲ್ಲಿ ತುಂಬಿ ನಡೆಸುತ್ತಿದ್ದಾನೆ.
934) ಅನಂತಶ್ರೀಃ
ಶ್ರೀ ಎಂದರೆ ಸಂಪತ್ತು. ಆಚಲವೂ ಅನಂತವೂ ಆದ ಹಿರಿಯ ತತ್ವ ಭಗವಂತ ಅನಂತಶ್ರೀಃ.
935) ಜಿತಮನ್ಯುಃ
ಭಗವಂತನಿಗೆ ಅಹಂಕಾರವಾಗಲಿ, ಕೋಪವಾಗಲಿ, ಆಕ್ರೋಶವಾಗಲಿ ಇಲ್ಲ. ಇಲ್ಲಿ 'ಮನ್ಯು' ಎನ್ನುವ ಪದಕ್ಕೆ ಸಿಟ್ಟು ಎನ್ನುವುದು ಒಂದು ಅರ್ಥವಾದರೆ ಇನ್ನೊಂದು ಮುಖದಲ್ಲಿ 'ಮನ್ಯು' ಎನ್ನುವುದಕ್ಕೆ  ಯಜ್ಞ ಹಾಗು ಜ್ಞಾನ ಎನ್ನುವ ಇತರ ಅರ್ಥವಿದೆ. 'ಮನ್ಯುಸೂಕ್ತ' ಭಗವಂತನ ಮಾಂಗಲಿಕ ಕೋಪವನ್ನು ಹೊಗಳುವ ಸೂಕ್ತ. ಭಗವಂತ ಜ್ಞಾನಸ್ವರೂಪನಾಗಿ ಎಲ್ಲಾ ಯಜ್ಞಗಳನ್ನು ಸ್ವೀಕರಿಸುವ ಕೋಪವೇ ಇಲ್ಲದ ಯಜ್ಞಗಳ ಸ್ವಾಮಿ.     
936) ಭಯಾಪಹಃ
ನಮ್ಮನ್ನು ಭಯದಿಂದ ಪಾರು ಮಾಡುವ ಭಗವಂತ ಭಯಾಪಹಃ. ದೇವರಿದ್ದಾನೆ, ಆತ ನಮ್ಮನ್ನು ಎಂದೂ ಕೈಬಿಡುವುದಿಲ್ಲ ಎಂದು ಸಂಪೂರ್ಣ ನಂಬಿದರೆ ನಾವು ಎಂದೂ ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಆತ  ಭಯಾಪಹಃ, ಆತ ನಮ್ಮನ್ನು ಭಯದಿಂದ ಪಾರುಮಾಡುತ್ತಾನೆ. ಉದಾಹರಣೆಗೆ ಒಂದು ಪುಟ್ಟ ಮಗು. ಅದು ಒಂಟಿಯಾಗಿದ್ದಾಗ ಒಂದು ಚಿಕ್ಕ ಹುಳವನ್ನು ಕಂಡರೂ ಭಯಪಡುತ್ತದೆ, ಆದರೆ ಅದೇ ಮಗು ತಾಯಿಯ ಮಡಿಲಲ್ಲಿದ್ದಾಗ ಎದುರಿಗೆ ಹುಲಿ ಚಿರತೆ ಬಂದರೂ ನಗುತ್ತಿರುತ್ತದೆ!  ಹೀಗೆ ನಾವು ಮಗುವಿನಂತೆ ಭಗವಂತನ ಮಡಿಲಲ್ಲಿ ಆಸರೆ ಕೋರಿದರೆ ಆತ ನಮಗೆ ರಕ್ಷಾ ಕವಚವಾಗುತ್ತಾನೆ.   
937) ಚತುರಶ್ರಃ
ಸಾಮಾನ್ಯವಾಗಿ ಒಂದು ಕೆಲಸ ತುಂಬಾ ಚೊಕ್ಕವಾಗಿ ಅಚ್ಚುಕಟ್ಟಾಗಿ ಆದರೆ ನಾವು 'ಸರ್ವಂ ಚತುರಶ್ರಮ್' ಎನ್ನುತ್ತೇವೆ.  ಆದರೆ ನಾವು ಮಾಡುವ ಯಾವುದೇ ಕೆಲಸ ನೂರಕ್ಕೆ ನೂರು ಚೊಕ್ಕವಾಗಿ ಅಚ್ಚುಕಟ್ಟಾಗಿ ಆಗುವುದೇ ಇಲ್ಲ. ಅಲ್ಲಿ ಯಾವುದಾದರೂ ಒಂದು ದೋಷ ಇದ್ದೇ ಇರುತ್ತದೆ. ಇದನ್ನು ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:
ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।
ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ    ॥ಅ-೧೮, ಶ್ಲೋ-೪೮॥ 
ಅಂದರೆ " ಬೆಂಕಿಯಿದ್ದಲ್ಲಿ ಹೊಗೆ ಇದ್ದಂತೆ ಸಕಲ ಕರ್ಮಗಳಲ್ಲಿ ದೋಷವಿದ್ದೇ ಇರುತ್ತದೆ, ಆದರೆ ನಾವು ಸಹಜವಾದ ಕರ್ಮವನ್ನು ಎಂದೂ ಬಿಡಬಾರದು"
ನಮ್ಮ ಪ್ರತಿಯೊಂದು ಕರ್ಮದಲ್ಲಿ ದೋಷವಿದ್ದಂತೆ ಭಗವಂತನ ಕರ್ಮದಲ್ಲಿ ದೋಷವಿರುವುದಿಲ್ಲ. ಆತ ಚತುರಶ್ರಃ.
ಅನಿರುದ್ಧ, ಸಂಕರ್ಷಣ ಪ್ರದ್ಯುಮ್ನ ಮತ್ತು ವಾಸುದೇವ ಎನ್ನುವ ನಾಲ್ಕು ರೂಪದಲ್ಲಿದ್ದು, ಚತುರತೆಯಿಂದ ಲೋಕದ ಸೃಷ್ಟಿಮಾಡಿ, ನಾಲ್ಕು ಅವಸ್ಥೆಗಳನ್ನು(ಎಚ್ಚರ, ಕನಸು, ನಿದ್ದೆ ಹಾಗು ತುರಿಯ), ದೇಹವೆಂಬ ಹನ್ನೊಂದು ಬಾಗಿಲಿನ ನಗರವನ್ನು(ನವರಂದ್ರಗಳು, ಹೊಕ್ಕುಳು ಮತ್ತು ನೆತ್ತಿಯಲ್ಲಿನ ಬ್ರಹ್ಮರಂದ್ರ) ಅಚ್ಚುಕಟ್ಟಾಗಿ ನಿಯಂತ್ರಿಸುವ ಭಗವಂತ, ಜೀವನಿಗೆ ಮೋಕ್ಷದ ಮಾರ್ಗವನ್ನು ತೋರುವ ಕಾರುಣ್ಯಮೂರ್ತಿ.
938) ಗಭೀರಾತ್ಮಾ
ಸರ್ವಾಂತರ್ಯಾಮಿ; ನಮ್ಮ ದೇಹದಲ್ಲಿ ಗುಪ್ತವಾಗಿ, ಅಳೆಯಲು ಅಸಾಧ್ಯವಾದ ಆಳದಲ್ಲಿ ಅಡಗಿರುವ ಸ್ವರೂಪಭೂತವಾದ ಮಹಾ ತತ್ವ ಭಗವಂತ ಗಭೀರಾತ್ಮಾ.
939) ವಿದಿಶಃ
ವಿವಿಧವಾದ ಸಂದೇಶಗಳನ್ನು, ವಿವಿಧ ಮಾಧ್ಯಮದ ಮೂಲಕ ನಿರಂತರ ಕಳುಹಿಸುವ ಭಗವಂತ ವಿದಿಶಃ. ಭಗವಂತನ ಅವತಾರದಲ್ಲಿ ಕೂಡಾ ಇದನ್ನು ಕಾಣಬಹುದು. ಶ್ರೀಕೃಷ್ಣ ತನ್ನ ಅವತಾರ ಕಾಲದಲ್ಲಿ ನಮಗೆ ಕೊಟ್ಟ ಸಂದೇಶ ಅಪರಿಮಿತ. ಯುದ್ಧ ಭೂಮಿಯಲ್ಲಿ ಆತ ಕೊಟ್ಟ ಸಂದೇಶ ಭಗವದ್ ಗೀತೆ, ಆನಂತರ ಅರ್ಜುನನಿಗೆ ಏಕಾಂತದಲ್ಲಿ ಭೋದಿಸಿದ 'ಅನುಗೀತೆ'; ಇಷ್ಟೇ ಅಲ್ಲದೆ, ತನ್ನ ಅವತಾರ ಸಮಾಪ್ತಿಯ ನಂತರ ತನ್ನ ಸಂದೇಶವನ್ನು ದೇಶದ ಮೂಲೆ-ಮೂಲೆಗೆ ತಲುಪಿಸುವಂತೆ ಉದ್ಧವನಿಗೆ ಭೋದಿಸಿದ ಉದ್ಧವ ಗೀತೆ. ಹೀಗೆ ಆತ ಕೆಲವೊಮ್ಮೆ ಸ್ವಯಂ ಸಂದೇಶವನ್ನು ಸಾರಿದರೆ, ಇನ್ನು ಕೆಲವೊಮ್ಮೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿ ಸಂದೇಶವನ್ನು ತಲುಪಿಸುತ್ತಾನೆ.     
940) ವ್ಯಾದಿಶಃ
ನಿರಂತರ ಸಂದೇಶವನ್ನು ಕಳುಹಿಸುವ ಭಗವಂತ ಕೆಲವೊಮ್ಮೆ ತನ್ನ ಆದೇಶವನ್ನು ಕೂಡಾ ರವಾನಿಸುತ್ತಾನೆ. ವಿವಿಧ ಆಜ್ಞೆಗಳನ್ನೀಯುವ ಭಗವಂತ  ವ್ಯಾದಿಶಃ
941) ದಿಶಃ
ಭಗವಂತನ ಸಂದೇಶ, ಆಜ್ಞೆ, ಕೇವಲ ಒಂದು ಪ್ರದೇಶಕ್ಕೆ , ಒಂದು ದೇಶಕ್ಕೆ ಮೀಸಲಾಗಿಲ್ಲ. ಆತ ದಿಕ್ಕು ದಿಕ್ಕಿನಲ್ಲಿ ತುಂಬಿದ್ದಾನೆ. ಸರ್ವರಿಗೂ ಫಲವನ್ನೀಯುವ, ಉಪದೇಶಿಸುವ ಭಗವಂತ
ದಿಶಃ.

No comments:

Post a Comment