Sunday, December 12, 2010

Vishnu sahasranama 799-803

ವಿಷ್ಣು ಸಹಸ್ರನಾಮ:
ಅರ್ಕೋ ವಾಜಸನಃ ಶೃಂಗೀ ಜಯಂತಃ ಸರ್ವವಿಜ್ಜಯೀ
799) ಅರ್ಕಃ

ಅರ್ಕ ಎಂದರೆ ಸೂರ್ಯ ಎನ್ನುವುದು ನಿಘಂಟಿನಲ್ಲಿ ಸಿಗುವ ಅರ್ಥ. ಸೂರ್ಯನಲ್ಲಿ ಸನ್ನಿಹಿತನಾಗಿ ಬೆಳಕನ್ನು ಕೊಟ್ಟು, ಕಣ್ಣಿನೊಳಗಿದ್ದು ನೋಡುವ ಶಕ್ತಿ ತುಂಬುವ ಭಗವಂತ ಅರ್ಕಃ.
ಭಗವಂತನನ್ನು ಅರ್ಚನೆ ಮಾಡುವುದಕ್ಕೋಸ್ಕರ ಬಳಸುವ ಮಂತ್ರಗಳು ಅರ್ಕಗಳು. ಆ ಮಂತ್ರಗಳಿಂದ ಅರ್ಚಿಸಲ್ಪಡುವ ಭಗವಂತ ಅರ್ಕಃ. ಯಾವುದರಿಂದ ನಾವು ಅರ್ಚನೆ ಮಾಡುತ್ತೇವೋ ಅದು ಅರ್ಕ. ನಾವು ಸಾಮಾನ್ಯವಾಗಿ ಅರ್ಚನೆ ಮಾಡುವುದು ನೀರಿನಿಂದ; ನೀರನ್ನು ಅರ್ಕ ಎನ್ನುತ್ತಾರೆ. ಭಗವಂತ ಪ್ರಪಂಚ ಸೃಷ್ಟಿಯಲ್ಲಿ ಮೊಟ್ಟ ಮೊದಲು ಸೃಷ್ಟಿ ಮಾಡಿದ್ದು ನೀರನ್ನು. ಮಹಾ ಪ್ರಳಯದ ಕಾಲದಲ್ಲಿ ಭಗವಂತ ಮಲಗಿದ್ದು ಸೂಕ್ಷ್ಮ ರೂಪದ ಪ್ರಳಯ ಜಲದಲ್ಲಿ.  ಆತನಿಗೆ ನೀರೆಂದರೆ ಅತಿಪ್ರೀಯ. ನೀರು ಅನೇಕ ಅರ್ಥಗಳಿಗೆ ಸಂಕೇತ. ನೀರು ಎಂದರೆ ಹರಿದುಕೊಂಡು ಹೋಗುವ ವಸ್ತು. ನಮ್ಮ ಮನಸ್ಸು ಭಕ್ತಿಯಿಂದ ಕರಗಿ ನೀರಾಗಿ ಹರಿದು ಭಗವಂತನೆಡೆಗೆ ಹೋಗಬೇಕು. ನಮ್ಮ ಮನಸ್ಸು ಭಕ್ತಿಯಿಂದ ಕರಗುವ ಸಂಕೇತ ಅರ್ಚನೆಯಲ್ಲಿ ಬಳಸುವ ನೀರು. ನೀರಿನಲ್ಲಿ ಸನ್ನಿಹಿತನಾಗಿದ್ದು, ಅದಕ್ಕೆ ಪಾವಿತ್ರ್ಯವನ್ನು ಕೊಟ್ಟ ಆನಂದ ಸ್ವರೂಪಿ, ಎಲ್ಲರಿಂದ ಪೂಜ್ಯನಾದ(One who has supreme bliss) ಪೂರ್ಣಾನಂದಸ್ವರೂಪ ಭಗವಂತ ಅರ್ಕಃ. 
800) ವಾಜಸನಃ
'ವಾಜ' ಎಂದರೆ ಆಹಾರ, ಯುದ್ಧ, ಕುದುರೆ(ವಾಜೀ), ವಾದ ಹೀಗೆ ಅನೇಕ ಅರ್ಥಗಳನ್ನು ಈ ಪದ ಕೊಡುತ್ತದೆ.
ಎಲ್ಲರ ಅಗತ್ಯಕ್ಕೆ ಬೇಕಾದ ಆಹಾರವನ್ನು, ಜ್ಞಾನವನ್ನು ಕೊಡುವ, ಕುದುರೆಯ ರೂಪದಲ್ಲಿ ಸೂರ್ಯ ಹಾಗು ಅಶ್ವಿದೇವತೆಗಳಲ್ಲಿ ಸನ್ನಿಹಿತನಾದ ಭಗವಂತ ವಾಜಸನಃ. ಆತ ವಾದದ ಮೂಲಕ ಅರಿವನ್ನು ಬೆಳೆಸುವವ. ಇಲ್ಲಿ ವಾದ ಎಂದರೆ ವಿಷಯ ತಿಳುವಳಿಕೆಗಾಗಿ ಮಾಡುವ ಚರ್ಚೆ.     
801) ಶೃಂಗೀ
ಶೃಂಗವುಳ್ಳ ಮೀನಿನ ರೂಪದಲ್ಲಿ ಅವತರಿಸಿದವನು, ಉನ್ನತಿಕೆ ಅಥವಾ ನಿಜವಾದ ದೊಡ್ಡಸ್ಥಿಕೆ ಉಳ್ಳ ಭಗವಂತ ಶೃಂಗೀ.
802) ಜಯಂತಃ
ಇಂದ್ರನ ಮಗನಾದ, ಕಾಲಿನ ಅಭಿಮಾನಿ ದೇವತೆ ಜಯಂತ. ಜಯಂತನೊಳಗಿದ್ದು ಸಮಸ್ಥ ದೇಹವನ್ನು ಧಾರಣೆ ಮಾಡುವ ಭಗವಂತ, ಬಾಳಿನಲ್ಲಿ ಜಯವನ್ನು ತರುವವನು. ಯಾರ ಹಂಗೂ ಇಲ್ಲದೆ ನಮ್ಮ ಕಾಲ ಮೇಲೆ ನಾವು ನಿಲ್ಲುವಂತೆ ಮಾಡುವ ಆತನಿಗೆ ಜಯಂತಃ ಅನ್ವರ್ಥ ನಾಮ.
803)ಸರ್ವವಿಜ್ಜಯೀ
ಎಲ್ಲವನ್ನು ಪಡೆದವನು, ಎಲ್ಲವನ್ನು ತಿಳಿದವನು, ಎಲ್ಲರನ್ನೂ ಅರಿತು ಎಲ್ಲರನ್ನೂ ಮೀರಿ ನಿಂತ ಭಗವಂತ ಸರ್ವವಿಜ್ಜಯೀ. ಆತ ಅವರವರ ಜೀವ ಸ್ವರೂಪದ ಯೋಗ್ಯತೆಗೆ ತಕ್ಕಂತೆ ಅಭೀಷ್ಠವೀಯುವವನು.

No comments:

Post a Comment