Wednesday, December 22, 2010

Vishnu Sahasranama 959-966

ವಿಷ್ಣು ಸಹಸ್ರನಾಮ:
ಪ್ರಮಾಣಂ ಪ್ರಾಣನಿಲಯಃ ಪ್ರಾಣಭೃತ್ ಪ್ರಾಣಜೀವನಃ
ತತ್ತ್ವಂ ತತ್ತ್ವವಿದೇಕಾತ್ಮಾ ಜನ್ಮಮೃತ್ಯುಜರಾತಿಗಃ
959) ಪ್ರಮಾಣಮ್
ಭಗವಂತ ಸರ್ವ ಪ್ರಮಾಣಗಳ ನೆಲೆ. ಎಲ್ಲವನ್ನು ಹುಟ್ಟಿಸುವವನು, ಎಲ್ಲವನ್ನು ಮುಗಿಸುವವನು ಆದ, ಎಲ್ಲಾ ಯಥಾರ್ಥಜ್ಞಾನದ ಕಡಲಾದ ಭಗವಂತ  ಪ್ರಮಾಣಮ್. ನಚಿಕೇತನಿಗೆ ಯಮ- ಎಲ್ಲಾ ಪ್ರಶ್ನೆಗಳಿಗೆ ಉತ್ತರವಿರುವ, ಪ್ರಪಂಚದ ಸಾರ ಸಂಗ್ರಹವಾದ ಬೀಜಾಕ್ಷರವನ್ನು ಹೇಳುವಾಗ ಭಗವಂತನನ್ನು ಕುರಿತು ಈ ರೀತಿ ಹೇಳುತ್ತಾನೆ: 
ಸರ್ವೇ ವೇದಾ ಯತ್ ಪದಮಾನನಂತಿ
ತಪಮ್ಸಿ  ಸರ್ವಾಣಿ ಚ ಯದ್ ವದಂತಿ ,
ಯದ್  ಇಚ್ಚಂತೋ   ಬ್ರಹ್ಮಚರ್ಯಂ   ಚರಂತಿ ,
ತತ್  ತೇ  ಪದಂ  ಸಂಗ್ರಹೇನ  ಬ್ರವೀಮಿ:
ಓಂ ಇತ್ಯೇತತ್.
ಅಂದರೆ " ಸಮಸ್ತ ವೇದದ ಸಮಸ್ತ ಮಂತ್ರ, ವೇದದ ಪ್ರತಿಯೊಂದು ವಾಕ್ಯ, ಪ್ರತಿಯೊಂದು ಶಬ್ಧ, ಈ ಪ್ರಪಂಚದಲ್ಲಿರುವ ಪ್ರತಿಯೊಂದು ನಾದ ಅಂತತಃ ಭಗವಂತನನ್ನು ಹೇಳುತ್ತದೆ. ಸರ್ವ ತಪಗಳು(ಆಲೋಚನೆಗಳು), ಭಗವಂತನನ್ನೇ ಹೇಳುತ್ತವೆ. ಇಂತಹ ಭಗವಂತನ ಅರಿವು ಬಂದಾಗ ಈ ಪ್ರಪಂಚದಲ್ಲಿರುವ ಪ್ರತಿಯೊಂದು ತರ್ಕಗಳು ಆ ಭಗವಂತನನ್ನೇ ಪ್ರಮಾಣಿಕರಿಸುತ್ತವೆ".     
960) ಪ್ರಾಣನಿಲಯಃ.
ಭಗವಂತ ಇರುವುದು ಪ್ರಾಣತತ್ವದಲ್ಲಿ. ಭಗವಂತನನ್ನು ಅರಿಯಬೇಕಾದರೆ ಮೊದಲು ಪ್ರಾಣತತ್ವದ ಅರಿವು ಬೇಕು. ನಮ್ಮೊಳಗಿದ್ದು, ನಮಗೆ ಉಸಿರಾಡಿಸುವ ಪ್ರಾಣದೇವರೊಳಗೆ ಭಗವಂತನಿದ್ದಾನೆ. ಆತ ಪ್ರಾಣನಿಲಯಃ.
961) ಪ್ರಾಣಭೃತ್
ನಮ್ಮನ್ನು ಧರಿಸಿದವನು ಪ್ರಾಣನಾದರೆ, ಪ್ರಾಣದೇವರನ್ನು ಧರಿಸಿದವನು ಭಗವಂತ. ಆತ ಪ್ರಾಣಭೃತ್.
962) ಪ್ರಾಣಜೀವನಃ
ಪ್ರಾಣ ಶಕ್ತಿಯ ಮೂಲಕ ನಮಗೆಲ್ಲಾ ಬದುಕು ಕೊಟ್ಟವ, ಪ್ರಾಣ ದೇವರಿಗೂ ಕೂಡಾ ಬದುಕು ಕೊಟ್ಟವ ಭಗವಂತ. ಪ್ರಾಣ ದೇವರು ನಮ್ಮನ್ನು ಉಸಿರಾಡಿಸಿದರೆ, ಪ್ರಾಣದೇವರನ್ನು ಉಸಿರಾಡಿಸುವವನು ಪ್ರಾಣಜೀವನಃ ಭಗವಂತ.
963) ತತ್ವಮ್
ತತವಾದ 'ವಾ'; ವಾ ಎಂದರೆ ವಿಜ್ಞಾನ. ಭಗವಂತ ಜ್ಞಾನದ ಕಡಲು. ಅಂತಹ ಭಗವಂತನನ್ನು ಹುಡುಕಿ ಅನುಭವಿಸಬೇಕು. ಅದು ಕಣ್ಣಿಗೆ ಕಾಣುವ ವಸ್ತುವಲ್ಲ. ಅಪರಂಪಾರವಾದ ಜ್ಞಾನದ ಕಡಲನ್ನು ನಾವು ಸ್ವರೂಪಭೂತವಾಗಿ ಅನುಭವಿಸಬೇಕು.    
964) ತತ್ವವಿತ್
ಜ್ಞಾನದ ಕಡಲಾದ ಮಹಾ ತತ್ವವನ್ನು ಸಂಪೂರ್ಣ ತಿಳಿದವರಿಲ್ಲ. ಅದನ್ನು ಸಂಪೂರ್ಣ ಬಲ್ಲವನು ಅವನೊಬ್ಬನೆ. 
965) ಎಕಾತ್ಮಾ
ಭಗವಂತನೊಬ್ಬನೇ ಆತ್ಮ ಶಬ್ಧವಾಚ್ಯ. ಸರ್ವ ಆತ್ಮಗಳ ಪ್ರಧಾನ. ಅನಂತ ಸುಖವನ್ನು ಕೊಡಬಲ್ಲ, ಜ್ಞಾನಾನಂದಮಯವಾದ ಏಕೈಕ ತತ್ವ ಭಗವಂತ ಎಕಾತ್ಮಾ.
966) ಜನ್ಮಮೃತ್ಯುಜರಾತಿಗಃ
ಜನ್ಮ-ಮೃತ್ಯ-ಷಡಾತ್ಮಗಳನ್ನು ದಾಟಿದವನು. ಇಲ್ಲಿ ಜರಾ ಷಡಾತ್ಮವನ್ನು ಸೂಚಿಸುತ್ತದೆ. ಅವುಗಳೆಂದರೆ ಮೋಹ , ಶೋಕ ,ಕ್ಷುತ್ (ಹಸಿವು), ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ)  ಮತ್ತು ವ್ಯಾಧಿ. ಭಗವಂತ ಇವುಗಳೆಲ್ಲವುದರ ಆಚೆಗಿರುವವನು ಹಾಗು ನಮ್ಮನ್ನು ಇದರಿಂದ ಪಾರುಮಾಡುವವನು. ನಮ್ಮೊಳಗೆ ಇರುವ ಭಗವಂತನಿಗೆ ಎಂದೂ ಇದರ ಲೇಪವಿಲ್ಲ. ಆತ ಸರ್ವವನ್ನೂ ಮೀರಿನಿಂತ ಜನ್ಮಮೃತ್ಯುಜರಾತಿಗಃ.

No comments:

Post a Comment